ಚಿನ್ನಾಭರಣ ಮಳಿಗೆಯಲ್ಲಿ ಗುಂಡು ಹಾರಾಟ ಪ್ರಕರಣ: ನಾಲ್ವರ ಬಂಧನ

Update: 2019-08-22 13:10 GMT

ಬೆಂಗಳೂರು, ಆ.22: ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ ಸಾಮ್ರಾಟ್ ಜ್ಯುವೆಲ್ಸ್‌ನ ಸಿಬ್ಬಂದಿ ಮೇಲೆ ಗುಂಡುಹಾರಿಸಿ ದರೋಡೆಗೆ ಯತ್ನಿಸಿದ ಪ್ರಕರಣ ಸಂಬಂಧ ಕೆಲವೇ ಸಮಯದೊಳಗೆ ನಾಲ್ವರನ್ನು ಬಂಧಿಸುವಲ್ಲಿ ಕೇಂದ್ರದ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಸೋಲ್ಲಾಪುರ ಮೂಲದ ಬಾಲಾಜಿ ರಮೇಶ್ ಗಾಯಕವಾಡ(25), ಹರಿಯಾಣದ ಬಲವಾನ್ ಸಿಂಗ್(24), ರಾಜಸ್ತಾನದ ಬಾಡಮೇರ್ ಜಿಲ್ಲೆಯ ಶ್ರೀರಾಮ(23) ಹಾಗೂ ಜಾಲೋರ್ ಜಿಲ್ಲೆಯ ಓಂ ಪ್ರಕಾಶ್(27) ಬಂಧಿತ ಆರೋಪಿಗಳೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆರೋಪಿಗಳನ್ನು ವಿನಾಯಕ ನಗರದ ಡಿವಿಜಿ ಬಡಾವಣೆಯಿಂದ ಬಂಧಿಸಲಾಗಿದ್ದು, ಇವರಿಂದ ನಾಡ ಪಿಸ್ತೂಲು, ಗುಂಡುಗಳು, 4 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಬಂಧಿತರಲ್ಲಿ ಪ್ರಮುಖವಾಗಿ ಬಾಲಾಜಿ ರಮೇಶ್ ಗಾಯಕವಾಡ್ ಮಹಾರಾಷ್ಟ್ರದಲ್ಲಿ ಕಳವು ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಉಳಿದ ಮೂವರು ಇದೇ ಮೊದಲ ಬಾರಿಗೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವರ ಹಿನ್ನೆಲೆಯ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ದುಷ್ಕರ್ಮಿಗಳು ಬಿಟ್ಟು ಹೋಗಿದ್ದ ಹೆಲ್ಮೆಟ್‌ನಲ್ಲಿದ್ದ ಕೂದಲು, ಅಂಗಡಿ ಹಾಗೂ ಹೊರ ಭಾಗದಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರದಲ್ಲಿನ ದೃಶ್ಯಾವಳಿಗಳ ಸುಳಿವನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಭಾಸ್ಕರ ರಾವ್ ತಿಳಿಸಿದರು.

ಏನಿದು ಪ್ರಕರಣ?: ಬುಧವಾರ ಮಧ್ಯಾಹ್ನ 2.40ರ ಸುಮಾರಿಗೆ ಚಿನ್ನ ಖರೀದಿ ನೆಪದಲ್ಲಿ ಮೂವರು ದರೋಡೆಕೋರರು ಚಿನ್ನದ ಮಳಿಗೆಗೆ ಬಂದಿದ್ದರು. ಸರ ಕೇಳಿದ ಆರೋಪಿಗಳು ಬಳಿಕ ಗುಂಡು ಹಾರಿಸಿ ಬೆದರಿಸಿದ್ದರು. ಕೂಡಲೇ ಮಾಲಕರ ಪತ್ನಿ ರಾಖಿ ಎಂಬುವವರು ಕುರ್ಚಿ ತೆಗೆದು ಎಸೆದು ಕೂಗಿದ್ದರು. ಆಗ ದರೋಡೆಕೋರರು ಮಿಸ್ ಫೈರ್ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ದಂಪತಿಗೆ ಪ್ರಶಸ್ತಿ

ದರೋಡೆ ನಡೆಸಲು ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳನ್ನು ಸಮಯ ಪ್ರಜ್ಞೆಯಿಂದ ಹಿಮ್ಮೆಟ್ಟಿಸಿದ ಆಶಿಷ್ ಹಾಗೂ ರಾಖಿ ದಂಪತಿಗೆ ಪ್ರಶಸ್ತಿ ನೀಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

-ಭಾಸ್ಕರ್ ರಾವ್, ನಗರ ಪೋಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News