ಭ್ರಷ್ಟಾಚಾರದಿಂದ ಮಠಾಧೀಶರೂ ಹೊರತಾಗಿಲ್ಲ: ನ್ಯಾ.ಅರಳಿ ನಾಗರಾಜ್

Update: 2019-08-22 15:44 GMT

ಬೆಂಗಳೂರು, ಆ.22: ನಾಡಿನ ಎಲ್ಲಾ ಮಠಾಧೀಶರು ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಹೀಗಾಗಿಯೇ ಭ್ರಷ್ಟಾಚಾರದ ವಿರುದ್ಧ ಯಾವ ಮಠಾಧೀಶರು ಆಂದೋಲನ ಶುರು ಮಾಡಿಲ್ಲ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಅಭಿಪ್ರಾಯಿಸಿದ್ದಾರೆ.

ಗುರುವಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸ್ನೇಹ ಯುವ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ, ಶ್ರಾವಣೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಠಾಧೀಶರಿಂದ ಸಮಾಜದಲ್ಲಿ ಬದಲಾವಣೆ ಕಾಣಬಹುದು. ಆದರೆ, ನಾಡಿನ ಯಾವೊಬ್ಬ ಮಠಾಧೀಶನೂ, ಭ್ರಷ್ಟಾಚಾರ ವಿರುದ್ಧ ಧ್ವನಿಗೂಡಿಸಿಲ್ಲ. ಮುಂದಿನ ದಿನಗಳಲ್ಲಾದರೂ ಮಠಾಧೀಶರು ಶುದ್ಧ ಮನಸಿನಿಂದ ಭ್ರಷ್ಟಾಚಾರ ವಿರುದ್ಧ ಗಟ್ಟಿಯಾದ ಆಂದೋಲನಕ್ಕೆ ಮುಂದಾದರೆ, ಜನತೆ ಎಲ್ಲ ರೀತಿಯ ಸಹಾಯ ಮಾಡಲು ಮುಂದಾಗುತ್ತಾರೆ. ನಾನು ಸಹ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುತ್ತೇನೆಂದು ಅವರು ಹೇಳಿದರು.

ವರದಕ್ಷಿಣೆ ತಡೆ, ಭ್ರಷ್ಟಾಚಾರ ತಡೆ, ಅಪರಾಧ ತಡೆಗೂ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ, ಇದರಿಂದ ಯಾವುದೇ ಪರಿಣಾಮ ಬೀರಿಲ್ಲ. ಸಮಾನತೆಯೂ ನಮ್ಮಲ್ಲಿ ಇಲ್ಲ. ಬಲಿಷ್ಠ ವ್ಯಕ್ತಿಗಳ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗದ ಕಾಲ ಇದಾಗಿದೆ. ಇಂತಹ ಕೆಟ್ಟ ವಾತಾವರಣವನ್ನು ನಿರ್ಮೂಲನೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಸಾರ್ವಭೌಮ. ಹಾಗಾಗಿ, ಚುನಾವಣೆ ಸಂದರ್ಭದಲ್ಲಿ ಎಚ್ಚರವಹಿಸಿ, ನಿಷ್ಠಾವಂತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ, ನಮ್ಮ ವಾತಾವರಣ ಕಲುಷಿತಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಸಾಮಾಜಿಕ ಪರಿಕಲ್ಪನೆ ಇರುತ್ತದೆ. ಅವರಿಂದಲೇ, ಒಳ್ಳೆಯ ಸಮಾಜ ಹುಟ್ಟಿಕೊಳ್ಳುವ ನಿರೀಕ್ಷೆ ಮಾಡಬಹುದು. ಹೀಗಾಗಿ ಸರಕಾರ ಗ್ರಾಮೀಣ ಭಾಗಕ್ಕೆ ಬಹುಪಾಲು ಆದ್ಯತೆ ನೀಡುವಂತಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೈಕೋರ್ಟ್ ವಕೀಲ ಬಾಬು ಪತ್ತಾರ್, ಸಂಘದ ಅಧ್ಯಕ್ಷ ಎಂ.ರಜೀಂತ್ ಕುಮಾರ್, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಜಯರಾಜ ನಾಯ್ಡು ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News