ಪೊಲ್ಲಾವರಂ ಟೆಂಡರ್‌ಗೆ ಕೋರ್ಟ್ ತಡೆ: ಜಗನ್ ರೆಡ್ಡಿಗೆ ಭಾರಿ ಹಿನ್ನಡೆ

Update: 2019-08-23 03:59 GMT

ಹೈದರಾಬಾದ್, ಆ.23: 58 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದ ಪೊಲ್ಲಾವರಂ ಜಲವಿದ್ಯುತ್ ಯೋಜನೆಯ ಟೆಂಡರ್ ರದ್ದತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿಯವರಿಗೆ ಭಾರಿ ಹಿನ್ನಡೆಯಾಗಿದೆ.

ನವಯುಗ ಇಂಜಿನಿಯರಿಂಗ್ ಲಿಮಿಟೆಡ್‌ಗೆ ರಾಜ್ಯ ಸರ್ಕಾರ ನೀಡಿದ್ದ ನೋಟಿಸ್ ರದ್ದುಪಡಿಸಿರುವ ಹೈಕೋರ್ಟ್ ಈ ಮಧ್ಯಂತರ ಆದೇಶ ಹೊರಡಿಸಿದೆ. ಗುತ್ತಿಗೆ ಹೊಣೆಗಾರಿಕೆಯನ್ನು ನಿಭಾಯಿಸದ ಮತ್ತು ಅವ್ಯವಹಾರ ಆರೋಪದಲ್ಲಿ ನವಯುಗಕ್ಕೆ ನೀಡಿದ್ದ ಗುತ್ತಿಗೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿತ್ತು. ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ನವಯುಗ ನ್ಯಾಯಾಲಯದ ಕದ ತಟ್ಟಿತ್ತು. ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ 2021ರ ವರೆಗೆ ಸಮಯಾವಕಾಶ ನೀಡಿದೆ. ಅಗತ್ಯ ಭೂಮಿಯನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ ವಿಳಂಬ ಮಾಡಿದ್ದೇ ಯೋಜನೆ ವಿಳಂಬಕ್ಕೆ ಕಾರಣ ಎಂದು ನವಯುಗ ವಾದಿಸಿತ್ತು.

ಕಳೆದ ತಿಂಗಳು ಎಂಟು ಮಂದಿ ಸರ್ಕಾರಿ ಅಧಿಕಾರಿಗಳ ಸಮಿತಿ 43 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಟೆಂಡರ್ ಪ್ರಕ್ರಿಯೆಯಲ್ಲಿ, ಖರೀದಿ ಮತ್ತು ನಿರ್ಮಾಣ ಕಾಮಗಾರಿಯಲ್ಲಿ ಸಮಸ್ಯೆಗಳಿವೆ ಎಂದು ಆಪಾದಿಸಿತ್ತು. ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿ ನವಯುಗಕ್ಕೆ 3128 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News