ಮೈತ್ರಿ ಸರಕಾರ ಪತನಕ್ಕೆ ದೇವೇಗೌಡರು, ಅವರ ಮಕ್ಕಳು ಕಾರಣರೇ ಹೊರತು ನಾನಲ್ಲ: ಸಿದ್ದರಾಮಯ್ಯ

Update: 2019-08-23 14:18 GMT

ಬೆಂಗಳೂರು, ಆ. 23: ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನೇರ ಕಾರಣ. ಆದರೆ, ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಶುಕ್ರವಾರ ಇಲ್ಲಿನ ತಮ್ಮ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತೊಬ್ಬರ ಮೇಲೆ ಗೂಬೆಕೂರಿಸುವುದು ದೇವೇಗೌಡರ ಕೆಲಸ. ಆ ಮೂಲಕ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಬಹುದೆಂಬುದು ಅವರ ಆಲೋಚನೆ. ಜನತೆ ನನ್ನ ರಾಜಕೀಯ ಜೀವನವನ್ನೂ ನೋಡಿದ್ದು, ಅದೇ ರೀತಿ ಗೌಡರನ್ನೂ ನೋಡಿದ್ದಾರೆ. ಇದೆಲ್ಲವೂ ಜನರಿಗೆ ಅರ್ಥವಾಗುತ್ತದೆ ಎಂದರು.

'ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ಸಹಿಸದ, ಎಚ್‌ಡಿಕೆ ಸಿಎಂ ಆಗಿರುವುದನ್ನು ಅರಗಿಸಿಕೊಳ್ಳದ ಸಿದ್ದರಾಮಯ್ಯನವರೇ ಮೈತ್ರಿ ಸರಕಾರದ ಪತನಕ್ಕೆ ಕಾರಣ. ವಿಪಕ್ಷ ನಾಯಕನಾಗಬೇಕೆಂಬ ಅವರ ಹಂಬಲ ಈಗ ಈಡೇರಿದೆ' ಎಂದು ದೇವೇಗೌಡ ಹೇಳಿದ್ದಾರೆ. ಇದನ್ನು ನಂಬಲು ಸಾಧ್ಯವೇ? ಸಿಎಂ ಆಗಲಿಕ್ಕೆ ಸರಕಾರ ಉರುಳಿಸುವುದು ಗೊತ್ತು. ಆದರೆ, ವಿಪಕ್ಷ ನಾಯಕನಾಗಬೇಕೆಂದು ಎಲ್ಲಿಯೂ ಸರಕಾರವನ್ನು ಯಾರೂ ಬೀಳಿಸಿಲ್ಲ ಎಂದು ತಿರುಗೇಟು ನೀಡಿದರು.

ಸರಕಾರ ಪತನಕ್ಕೆ ಅವರೇ ಕಾರಣ: ನನ್ನ ವಿರುದ್ದ ದೇವೇಗೌಡರು ಗಂಭೀರ ಆರೋಪ ಮಾಡಿದ್ದು, ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯರೆ ಕಾರಣ ಎಂದು ಹೇಳಿದ್ದಾರೆ. ಆದರೆ, ಮೈತ್ರಿ ಸರಕಾರ ಪತನಕ್ಕೆ ದೇವೇಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣ ಕಾರಣ ಎಂದು ವಾಗ್ದಾಳಿ ನಡೆಸಿದರು.

ಸರಕಾರ ಬೀಳಿಸುವ ನೀಚ ರಾಜಕಾರಣ ಮಾಡಿಲ್ಲ. ಅದೇನಿದ್ದರೂ ದೇವೇಗೌಡ ಮತ್ತು ಅವರ ಮಕ್ಕಳ ಹುಟ್ಟು ಗುಣ. ಗೌಡರು ಬೇರೆ ಸರಕಾರ ಬೀಳಿಸುವುದರಲ್ಲಿ ನಿಪುಣರು. ಧರ್ಮಸಿಂಗ್‌ಗೆ ಬೆಂಬಲ ಕೊಟ್ಟು ಬೀಳಿಸಿದ್ದು ಯಾರು? ಬೊಮ್ಮಾಯಿ ಸರಕಾರದಲ್ಲಿ ಮಂತ್ರಿಯಾಗಿ ಆ ಸರಕಾರ ಬೀಳಿಸಿದ್ದು ಯಾರು? ರಾತ್ರೋ ರಾತ್ರಿ ಬಿಜೆಪಿ ಜೊತೆ ಹೋದವರು ಯಾರು? ಬಿಜೆಪಿ ಜೊತೆ ಸರಕಾರ ಸಾಧ್ಯವೇ ಇಲ್ಲ? ಹಾಗೇನಾದರೂ ಆದರೆ ಅದು ನನ್ನ ಹೆಣದ ಮೇಲೆ ಅಂದಿದ್ದರು. 20-20 ಒಪ್ಪಂದ ಮಾಡಿಕೊಂಡು ವಚನ ಭ್ರಷ್ಟ ಆದರು. ಅದರಿಂದಲೇ ಬಿಜೆಪಿ ಬೆಳೆದದ್ದು.

ನನ್ನ ವಿರುದ್ದ ದೇವೇಗೌಡರು ಮಾಡಿರುವ ಎಲ್ಲ ಆರೋಪಗಳು ರಾಜಕೀಯ ದುರದ್ದೇಶದಿಂದ ಕೂಡಿದೆ. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬುದು ನನ್ನ ಆಶಯವಾಗಿತ್ತು. 80 ಮಂದಿ ಶಾಸಕರಿದ್ದರೂ ಜೆಡಿಎಸ್‌ಗೆ ಬೆಂಬಲ ನೀಡಿದೆವು. ಅಲ್ಲದೆ, ಕುಮಾರಸ್ವಾಮಿ ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆಂದು ಟೀಕಿಸಿದರು.

ಸೇಡಿನ ರಾಜಕಾರಣದ ಆಕ್ರೋಶ ನನ್ನ ಮೇಲೆ ಎಷ್ಟಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಯಾವ ಪಕ್ಷ ಅವರನ್ನು ಬೆಂಬಲಿಸಿತ್ತೋ ಆ ಪಕ್ಷವನ್ನೇ ಬೀಳಿಸುತ್ತಾರೆ. ನಾನು ಜೆಡಿಎಸ್‌ನಲ್ಲೆ ಇದ್ದವನು. ಇವರ ಸಂಚು, ಕುತಂತ್ರ ಗೊತ್ತಾಗುವುದಿಲ್ಲವೆ? ಪ್ರಧಾನಿ ಮಾಡಿದ ಕಾಂಗ್ರೆಸ್, ಸೀತಾರಾಂ ಕೇಸರಿ ವಿಚಾರದಲ್ಲಿ ಗೌಡರು ಹೇಗೆ ನಡೆದುಕೊಂಡರು? ಜಾಣ ಕುರುಡರಂತೆ ಅವರಿರಬಹುದು ಎಂದು ಟೀಕಿಸಿದರು.

ಏಕಪಕ್ಷೀಯ ನಿರ್ಧಾರ: ಶಾಸಕರನ್ನು ನಿರ್ಲಕ್ಷ್ಯ ಮಾಡಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಮತ್ತು ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಮೈತ್ರಿ ಸರಕಾರ ಪತನಕ್ಕೆ ಕಾರಣ. ನಾನೂ ಐದು ವರ್ಷ ಸಿಎಂ ಆಗಿದ್ದೆ. ಆಗ ಒಬ್ಬ ಶಾಸಕನೂ ಸರಕಾರದ ವಿರುದ್ದ ಮಾತನಾಡಲಿಲ್ಲ ಎಂದು ಸಿದ್ದರಾಮಯ್ಯ ನುಡಿದರು.

ಸಮನ್ವಯ ಸಮಿತಿಯಲ್ಲಿ ಕೈಗೊಂಡ ಯಾವ ತೀರ್ಮಾನವನ್ನೂ ಕುಮಾರಸ್ವಾಮಿ ಜಾರಿ ಮಾಡಲಿಲ್ಲ. ಅವರ ನಡವಳಿಕೆಯಿಂದ ಶಾಸಕರು ಬೇಸತ್ತಿದ್ದರು. ಏಕಪಕ್ಷೀಯ ನಿರ್ಧಾರಗಳು ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ಶಾಸಕರು ಹಾಗೂ ಸಚಿವರೇ ಬಹಿರಂಗಪಡಿಸಿದ್ದಾರೆಂದು ಹೇಳಿದರು.

ಯಾರನ್ನೂ ಬೆಳೆಸಲ್ಲ: ದೇವೇಗೌಡರು ರಾಜಕೀಯವಾಗಿ ಯಾರನ್ನೂ ಬೆಳೆಸಲ್ಲ. ಇಡೀ ರಾಜಕೀಯ ಜೀವನದಲ್ಲಿ ಯಾರನ್ನೂ ಬೆಳೆಯಲು ಬಿಟ್ಟಿಲ್ಲ. ಅವರ ಕುಟುಂಬದವರನ್ನು ಮಾತ್ರ ಬೆಳೆಸುತ್ತಾರಷ್ಟೆ. ಅದು ಬಿಟ್ಟು ಅವರದ್ದೇ ಜಾತಿಯವರನ್ನೂ ಅವರು ರಾಜಕೀಯವಾಗಿ ಬೆಳೆಸಲ್ಲ. ಎಲ್ಲ ಜಾತಿಯಲ್ಲೂ ನನಗೆ ಸ್ನೇಹಿತರಿದ್ದಾರೆ. ಆದರೂ, ನನ್ನನ್ನು ಲಿಂಗಾಯತ ವಿರೋಧಿ, ಒಕ್ಕಲಿಗರ ವಿರೋಧಿ ಎಂದು ಟೀಕಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೌದು ನಾನೇ ಹೇಳಿದ್ದೆ: ಲೋಕಸಭೆ ಚುನಾವಣೆ ವೇಳೆ ಮೈತ್ರಿ ಬೇಡ. ಫ್ರೆಂಡ್ಲಿ ಫೈಟ್ ಇರಲಿ ಎಂದು ನಾನೇ ಹೇಳಿದ್ದೆ. ಹಳೆ ಮೈಸೂರು ಭಾಗದಲ್ಲಿ ಪಂಚಾಯತ್ ಮಟ್ಟದಿಂದ ಎಲ್ಲ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಹೋರಾಟ ಮಾಡಿದ್ದೆವು. ಹೀಗಾಗಿ ಮೈತ್ರಿ ಬೇಡ ಎಂದು ಹೇಳಿದ್ದೆ ಎಂದರು.

ಮಂಡ್ಯ, ತುಮಕೂರು ಕ್ಷೇತ್ರದಲ್ಲಿ ಸೋಲಿಗೆ ನಾವೇ ಕಾರಣ ಎಂದರು. ಆದರೆ, ಮೈಸೂರು, ಬೆಂಗಳೂರು ಉತ್ತರ ಸೇರಿ ಹಲವೆಡೆ ನಮ್ಮ ಸೋಲಿಗೆ ನೀವು ಕಾರಣ ಅಲ್ಲವೋ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹಾಸನದಲ್ಲಿ ಅವರ ಮೊಮ್ಮಗ ಗೆದ್ದಿದ್ದಾರೆ. ನಮ್ಮ ಪಕ್ಷ ಕೆಲಸ ಮಾಡಿಲ್ಲವೇ? ಹೇಗೆ ಗೆದ್ದರು? ಒಟ್ಟಿಗೆ ಪ್ರಚಾರ ಮಾಡಿದ್ದೇವೆ. ತಾತಾ-ಮೊಮ್ಮಗ ಸ್ಪರ್ಧಿಸಿದ್ದಾರೆಂದು ಜನರೆ ಸೋಲಿಸಿದ್ದಾರೆಂದು ಸ್ಪಷ್ಟನೆ ನೀಡಿದರು.

‘ನಾನು ರಾಜಕೀಯವಾಗಿ ದೇವೇಗೌಡರನ್ನು ವಿರೋಧಿಸಿದರೆ ಅದಕ್ಕೆ ಜಾತಿಬಣ್ಣ ಕಟ್ಟುತ್ತಾರೆ. ಒಕ್ಕಲಿಗರ ವಿರೋಧಿ ಎಂದು ಬಿಂಬಿಸಿ ಕಣ್ಣೀರು ಹಾಕುತ್ತಾರೆ. ಇವೆಲ್ಲ ದೇವೇಗೌಡರ ಹಳೆ ಗಿಮಿಕ್. ಲಿಂಗಾಯತ ವಿರೋಧಿ ಎಂದು ನನ್ನನ್ನು ಬಿಂಬಿಸಿದರು. ಆದರೆ, ನನ್ನ ಕಾರ್ಯಕ್ರಮಗಳು ಎಲ್ಲ ಜಾತಿ-ಧರ್ಮಕ್ಕೂ ಅನುಕೂಲ ಆಗಿವೆ. ನನಗೆ ದೇವೇಗೌಡರ ಸರ್ಟಿಫಿಕೇಟ್ ಬೇಕಿಲ್ಲ’

-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News