ದೇವೇಗೌಡರಿಂದ ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಆರೋಪ: ಝಮೀರ್ ಅಹ್ಮದ್

Update: 2019-08-23 12:21 GMT

ಬೆಂಗಳೂರು, ಆ.23: ಜೆಡಿಎಸ್ ಪಕ್ಷ ಹಾಗೂ ಎಚ್.ಡಿ.ಕುಮಾರಸ್ವಾಮಿಯ ತಪ್ಪಿನಿಂದಾಗಿ ಮೈತ್ರಿ ಸರಕಾರ ಪತನವಾಗಿದೆಯೇ ಹೊರತು, ಇದರಲ್ಲಿ ಸಿದ್ದರಾಮಯ್ಯನವರ ಯಾವ ಪಾತ್ರವೂ ಇಲ್ಲ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸ್ಟಾಂಡರ್ಡ್ ರಾಜಕಾರಣಿ. ದೇವೇಗೌಡ ಹಾಗೂ ಕುಮಾರಸ್ವಾಮಿ ರೀತಿಯಲ್ಲಿ ಅವರು ರಾಜಕಾರಣ ಮಾಡುವುದಿಲ್ಲ ಎಂದು ಕಿಡಿಗಾರಿದರು.

ಕುಮಾರಸ್ವಾಮಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ರಾಜಕೀಯ ಲಾಭಕ್ಕಾಗಿ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಾರೆ. ಕುಮಾರಸ್ವಾಮಿಗೆ ಸಿದ್ದರಾಮಯ್ಯ ಕಿರುಕುಳ ನೀಡಿರುವುದನ್ನು ದೇವೇಗೌಡ ಸಾಬೀತು ಮಾಡಲಿ ಎಂದು ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು.

ಸಿದ್ದರಾಮಯ್ಯ ವಿರುದ್ಧ ಅನಗತ್ಯವಾಗಿ ಆರೋಪಗಳನ್ನು ಮಾಡುವುದು ಸರಿಯಲ್ಲ. ಕಾಂಗ್ರೆಸ್‌ನವರ ಕಿರುಕುಳದಿಂದ ಕುಮಾರಸ್ವಾಮಿ ಹಲವು ಬಾರಿ ಕಣ್ಣೀರು ಹಾಕಿದ್ದಾರೆ ಎಂದು ದೇವೇಗೌಡ ಆರೋಪಿಸಿದ್ದಾರೆ. ಕಾಂಗ್ರೆಸ್‌ನವರು ಯಾವಾಗ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬುದರ ಬಗ್ಗೆ ಒಂದೇ ಒಂದು ಉದಾಹರಣೆ ನೀಡಲಿ ಎಂದು ಅವರು ಹೇಳಿದರು.

ಮೈತ್ರಿ ಸರಕಾರದಲ್ಲಿ ನಾನು ಸಚಿವನಾಗಿದ್ದೆ. ನನಗೆ ಗೊತ್ತಿರುವಂತೆ ಎಲ್ಲ ಶಾಸಕರು ಕುಮಾರಸ್ವಾಮಿ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದ್ದರು. ಕೇವಲ ಶಾಸಕರಷ್ಟೇ ಅಲ್ಲ, ಸಚಿವರು ಅಸಮಾಧಾನಗೊಂಡಿದ್ದರು. ಎಲ್ಲ ಶಾಸಕರು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆದರೆ, ಈಗಲೂ ಮೈತ್ರಿ ಸರಕಾರವನ್ನು ನಾವು ಉಳಿಸಿಕೊಳ್ಳಬಹುದು ಎಂದು ತಾಜ್‌ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎದುರು ಸಲಹೆ ನೀಡಿದ್ದೆ ಎಂದು ಅವರು ಹೇಳಿದರು.

ಆಯಾ ಸಚಿವರ ಇಲಾಖೆಗಳಲ್ಲಿ ಅವರವರ ಕೆಲಸಗಳನ್ನು ಮಾಡಿಕೊಡುವಂತೆ ಹೇಳಿದ್ದೆ. ಆದರೆ, ಕುಮಾರಸ್ವಾಮಿ ನನ್ನ ಸಲಹೆಯನ್ನು ಸ್ವೀಕರಿಸಲಿಲ್ಲ. ಒಂದು ವೇಳೆ ಆ ಸಲಹೆಯನ್ನು ಸ್ವೀಕರಿಸಿದ್ದರೆ ಮೈತ್ರಿ ಸರಕಾರ ಐದು ವರ್ಷ ನಡೆಯುತ್ತಿತ್ತು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಈಗ ಬೇರೆಯವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ದೂರಿದರು.

ದೇವೇಗೌಡರು ಯಾವುದೇ ಹೇಳಿಕೆ ನೀಡಿದರೂ ರಾಜಕೀಯ ಲಾಭವನ್ನು ಇಟ್ಟುಕೊಂಡೆ ಮಾತನಾಡುತ್ತಾರೆ. ಸಿದ್ದರಾಮಯ್ಯ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತಿರುವ ಹಿಂದೆಯೂ ಯಾವುದೋ ಒಂದು ರಾಜಕೀಯ ಲಾಭ ಇರುತ್ತದೆ. ಆದರೆ, ಸಿದ್ದರಾಮಯ್ಯ ಆ ರೀತಿಯಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಲೇ ಇದ್ದರು. ಶಾಸಕರಲ್ಲಿ ಅಸಮಾಧಾನವಿದ್ದ ಕಾರಣ ಅವರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ. 17 ಮಂದಿ ಶಾಸಕರನ್ನು ಸಿದ್ದರಾಮಯ್ಯನವರೇ ಕಳುಹಿಸಿರುತ್ತಿದ್ದರೆ ಅವರನ್ನು ಯಾಕೆ ಅನರ್ಹ ಮಾಡುತ್ತಿದ್ದರು. ಈ ವಿಚಾರವನ್ನು ದೇವೇಗೌಡರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News