ಕಲಾ ಮಂದಿರಗಳು ಕಲೆ ಕೊಂಡುಕೊಳ್ಳುವುದು ಕಲಿಸಲ್ಲ: ಬರಗೂರು ರಾಮಚಂದ್ರಪ್ಪ

Update: 2019-08-25 15:40 GMT

ಬೆಂಗಳೂರು, ಆ.25: ಕಲಾ ಮಂದಿರಗಳು ಕಲೆಯನ್ನು ಕೊಂಡುಕೊಳ್ಳುವುದಲ್ಲ, ಕಂಡುಕೊಳ್ಳುವುದನ್ನು ಕಲಿಸುತ್ತದೆ ಎಂದು ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಲಾಮಂದಿರದ ಶತಮಾನೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲೆಯನ್ನು ಪ್ರತಿಯೊಬ್ಬರು ಆರಾಧಿಸಿದಾಗ ಮಾತ್ರ ಕಲೆಗೆ ಬೆಲೆ ಸಿಗುತ್ತದೆ. ಕಲೆಯನ್ನು ಕೊಂಡುಕೊಳ್ಳುವುದು ಮುಖ್ಯವಲ್ಲ, ಕಲೆಯನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರು ಆರಾಧಿಸುವಂತಾಗಬೇಕು ಎಂದರು.

ಅ.ನ.ಸುಬ್ಬುರಾವ್ ಕಲಾಮಂದಿರವನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವವಾದ ಪಾತ್ರ ವಹಿಸಿದ್ದರು. ಕಲಾವಿದರಲ್ಲಿ ಸೃಜನಶೀಲತೆ ಬೆಳೆಸಿದರು. ಅ.ನ.ಸುಬ್ಬುರಾವ್ ಶ್ರಮ ಮೂಲವಾದ ಸೃಜನಶೀಲ ಸಂಸ್ಕೃತಿಯನ್ನು ಹೊಂದಿದ್ದರು, ಮಮತೆಯುಳ್ಳ ವ್ಯಕ್ತಿತ್ವ ಅವರದಾಗಿತ್ತು ಎಂದು ಅವರನ್ನು ಸ್ಮರಿಸಿದರು.

ಶತಮಾನೋತ್ಸವ ಪ್ರಶಸ್ತಿ ಪುರಸ್ಕತರಾದ ಡಾ.ರಾಜೀವ್ ತಾರಾನಾಥ್ ಪ್ರಗತಿಪರವಾದ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡವರು. ಅವರಿಗೆ ಶತಮಾನೋತ್ಸವ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದು ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.

ರಂಗಕರ್ಮಿ ಅರುಂಧತಿ ನಾಗ್ ಮಾತನಾಡಿ, ಅ.ನ.ಸುಬ್ಬುರಾವ್ ಅವರಂತ ವ್ಯಕ್ತಿತ್ವ ಹೊಂದಿರುವರು ಇಂದಿನ ಸಮಾಜಕ್ಕೆ ಅವಶ್ಯವಿದೆ. ಕಲಾವಿದರಿಗೆ ಕಲೆಯೊಂದಿಗೆ ಬದುಕಿನ ಮೌಲ್ಯವನ್ನು ಅವರು ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಾಮಾಜಿಕ ಕಳಕಳಿಯುಳ್ಳಂತಹ ಸಂಘ ಸಂಸ್ಥೆಗಳನ್ನು ಬೆಳೆಸಿ ಪೋಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಮ್ಮ ವೃತ್ತಿ, ನೆಲ, ಭಾಷೆಯ ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಸ್ಥಳೀಯ ಭಾಷೆಯನ್ನು ಪ್ರೀತಿಸುವ ಮೂಲಕ ಕನ್ನಡ ಭಾಷೆಯನ್ನು ಪ್ರಶಂಸೆಗೆ ವ್ಯಕ್ತಪಡಿಸಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಸಾಂಸ್ಕೃತಿಕ ಚಿಂತಕ ಡಾ.ರಾಜೀವ್ ತಾರಾನಾಥ್ ಅವರಿಗೆ ‘ಶತಮಾನೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಇದೇ ವೇಳೆ ‘ಕಲಾಮಂದಿರ ಮತ್ತು ಕಲಾಲೋಕ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಕಲಾವಿದ ಖಮಡೇರಾವ್, ಬಾಲಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ ಎಂಬುದು ಸಣ್ಣತನದಿಂದ ಕೂಡಿದ್ದು, ದೇಶ ಸಣ್ಣದಾಗುತ್ತಿದೆ. ಅ.ನ.ಸು ಮಹಿಳೆಯರಿಗೆ ಕಲೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ಅಂದಿನ ಮಹಿಳೆಯರು ಸ್ವತಂತ್ರವಾಗಿ ಬದುಕುವ ಪಾಠ ಹೇಳಿಕೊಟ್ಟರು. ಕಲೆ ಸೌಂದರ್ಯದ ಹೊಸ ರೂಪವನ್ನು ಸೃಷ್ಟಿಸುವುದಾಗಿದೆ.

- ಡಾ.ರಾಜೀವ್ ತಾರಾನಾಥ್, ಸಾಂಸ್ಕೃತಿಕ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News