ಕನ್ನಡ ತಾಂತ್ರಿಕವಾಗಿ ಬೆಳೆಸಲು ಆದ್ಯತೆ ಇರಲಿ: ಎಚ್.ಎಸ್.ದೊರೆಸ್ವಾಮಿ

Update: 2019-08-25 15:58 GMT

ಬೆಂಗಳೂರು, ಆ.25: ಕನ್ನಡ ಭಾಷೆ ತಾಂತ್ರಿಕವಾಗಿ ಬೆಳೆದರೆ ಮಾತ್ರ ಮುಂದಿನ ಪೀಳಿಗೆಯೂ ಭಾಷೆಯ ಜೊತೆ ನಂಟನ್ನು ಬೆಳೆಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಕನ್ನಡವನ್ನು ತಂತ್ರಜ್ಞಾನಕ್ಕೆ ಹೊಂದಿಸಿಕೊಳ್ಳಲು ಹೆಚ್ಚಿನ ಆದ್ಯತೆ ಕೊಡಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದ್ದಾರೆ.

ರವಿವಾರ ಕನ್ನಡ ಗಣಕ ಉಚಿತ ತರಬೇತಿ ಗಾಂಧಿಭವನದಲ್ಲಿ ಆಯೋಜಸಿದ್ದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋಕಾಕ್ ಚಳುವಳಿಯಲ್ಲಿ ಕನ್ನಡದ ಉಳಿಸುವ ಕೆಲಸ ನಡೆಸಿದರೂ, ಸರೋಜಿನಿ ಮಹಿಷಿ ವರದಿ ಜಾರಿಯಾಗದೆ ಕನ್ನಡಿಗರ ಉದ್ಯೋಗಕ್ಕೆ ಸಂಚಕಾರ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ತಂತ್ರಾಂಶದ ಮೂಲಕ ಸ್ಪರ್ಧಾತ್ಮಕ ಔದ್ಯೋಗಿಕ ನೆಲೆಗಟ್ಟು ಒದಗಿಸುತ್ತಿರುವ ಕನ್ನಡ ಗಣಕ ಉಚಿತ ತರಬೇತಿ ಕಾರ್ಯ ಪ್ರಶಂಸನೀಯವಾದದ್ದು. ಸರಕಾರವೂ ಮಾಡಲಾಗದಂತಹ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಹಾಡು ಕುಣಿತಗಳಿಂದ ಕನ್ನಡ ಅಭಿವೃದ್ಧಿ ಸಾಧ್ಯವಿಲ್ಲ, ಸರಕಾರ ಇಂತಹ ಸಂಸ್ಥೆಗಳಿಗೆ ಅನುದಾನ ನೀಡಿ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.

ಕನ್ನಡ ಗಣಕ ಉಚಿತ ತರಬೇತಿ ಸಂಸ್ಥೆಯ ಸಂಸ್ಥಾಪಕ ಡಾ.ಆರ್.ಎ.ಪ್ರಸಾದ್ ಮಾತನಾಡಿ, ತಮಿಳುನಾಡು, ಕೇರಳ, ಆಂಧ್ರ ರಾಜ್ಯಗಳಿಗೆ ಹೋಲಿಸಿದರೆ ಪ್ರಾದೇಶಿಕ ಭಾಷಾ ತಂತ್ರಾಂಶ ಅನುಷ್ಠಾನದಲ್ಲಿ ಕರ್ನಾಟಕ 20 ವರ್ಷ ಹಿಂದಿದೆ. ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯ ಮುಖಾಂತರ ಅನ್ನ ದೊರಕಲು ಯಾರಾದರೂ ಅಡ್ಡಿಯಾದಲ್ಲಿ ಅದು ಮಾನವ ಹಕ್ಕು ಉಲ್ಲಂಘನೆಯಾದಂತೆ ಎಂದರು.

ಸಮಾರಂಭದಲ್ಲಿ 120 ಸರಕಾರಿ ನೌಕರರು ಹಾಗೂ ಪಾಲಿಕೆ ನೌಕರರು ಸೇರಿದಂತೆ 350 ಅಭ್ಯರ್ಥಿಗಳಿಗೆ ಕನ್ನಡ ಗಣಕ ಯಂತ್ರ ತರಬೇತಿ ಪ್ರಮಾಣ ಪತ್ರ ನೀಡಲಾಯಿತು. ಡಾ.ಎಸ್.ಎಲ್.ಗಂಗಾಧರಪ್ಪ, ರಾಜ್ಯ ಸರಕಾರದ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪುರುಷೋತ್ತಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News