ಬೃಹತ್ ಬಹು ರಾಕೆಟ್ ವಾಹಕ ಪರೀಕ್ಷೆ ನಡೆಸಿದ ಉತ್ತರ ಕೊರಿಯ

Update: 2019-08-25 17:12 GMT

ಸಿಯೋಲ್,ಆ.25: ಅಧ್ಯಕ್ಷ ಕಿಮ್ ಜೊಂಗ್ ಉನ್ ನೇತೃತ್ವದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಬೃಹತ್ ಬಹುರಾಕೆಟ್ ವಾಹಕದ ಪರೀಕ್ಷಾರ್ಥ ಉಡಾವಣೆ ನಡೆಸಿರುವುದಾಗಿ ಉತ್ತರ ಕೊರಿಯ ರವಿವಾರ ತಿಳಿಸಿದ್ದು, ಅಮೆರಿಕದ ಜೊತೆಗಿನ ಪರಮಾಣು ಚರ್ಚೆಗೂ ಮೊದಲು ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ತನ್ನ ಶಸ್ತ್ರಾಸ್ತ್ರಗಳ ವಿಸ್ತರಣೆ ಕಾರ್ಯತಂತ್ರದ ತುಣುಕನ್ನು ಪ್ರದರ್ಶಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಶನಿವಾರ ನಡೆಸಿದ ಶಸ್ತ್ರಾಸ್ತ್ರ ಪರೀಕ್ಷೆ ಯಶಸ್ವಿಯಾಗಿದೆ ಮತ್ತು ಸುದ್ದಿ ಪ್ರಸಾರ ಮಾಡಿರುವ ಉತ್ತರ ಕೊರಿಯದ ಸೆಂಟ್ರಲ್ ಸುದ್ದಿ ಸಂಸ್ಥೆ, ಈ ಆಯುಧ ನಿಜವಾಗಿಯೂ ಅದ್ಭುತ ಎಂದು ಅಧ್ಯಕ್ಷ ಕಿಮ್ ಹೇಳುತ್ತಿರುವ ದೃಶ್ಯವನ್ನು ಪ್ರದರ್ಶಿಸಿದೆ. ಶತ್ರುಪಡೆಗಳಿಂದ ಎದುರಾಗುವ ಒತ್ತಡ ಮತ್ತು ಸೇನಾ ಬೆದರಿಕೆಯನ್ನು ದೂರ ಮಾಡಲು ಕೊರಿಯನ್ ಮಾದರಿಯ ಯುದ್ಧತಂತ್ರ ಮತ್ತು ವ್ಯೆಹಾತ್ಮಕ ಆಯುಧಗಳ ಅಭಿವೃದ್ಧಿಯ ಅಗತ್ಯತೆಯತ್ತ ಕಿಮ್ ಬೆಟ್ಟು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಉತ್ತರ ಕೊರಿಯದ ಹೊಸ ಕ್ಷಿಪಣಿ ವಾಹಕ ಉಡಾವಣೆ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಿಮಗೆಲ್ಲರಿಗೂ ತಿಳಿದಿರುವಂತೆ ಕಿಮ್ ಜೊಂಗ್ ಉನ್ ಕ್ಷಿಪಣಿಗಳನ್ನು ಪರೀಕ್ಷಿಸುವುದನ್ನು ಇಷ್ಟಪಡುತ್ತಾರೆ. ನಾವೆಂದೂ ಕಡಿಮೆ ಅಂತರದ ಕ್ಷಿಪಣಿಗೆ ನಿರ್ಬಂಧ ಹೇರಿಲ್ಲ. ಮುಂದೇನಾಗುತ್ತದೋ ನೋಡೋಣ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News