ಶಿಕ್ಷಣದ ಬ್ರಾಹ್ಮಣೀಕರಣ, ಸಂಸ್ಕೃತಮಯಕ್ಕೆ ಕೇಂದ್ರದ ಹುನ್ನಾರ: ಜಿ.ಕರುಣಾನಿಧಿ

Update: 2019-08-25 17:19 GMT

ಬೆಂಗಳೂರು, ಆ.25: ಕೇಂದ್ರ ಸರಕಾರ ಶಿಕ್ಷಣವನ್ನು ಬ್ರಾಹ್ಮಣೀಕರಣ, ಖಾಸಗೀಕರಣ ಹಾಗೂ ಸಂಸ್ಕೃತಮಯ ಮಾಡಲು ಹೊರಟಿದೆ. ಇದರ ವಿರುದ್ಧ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಜನಾಂದೋಲನ ರೂಪಿಸಬೇಕಾಗಿದೆ ಎಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯದರ್ಶಿ ಜಿ.ಕರುಣಾನಿಧಿ ಅಭಿಪ್ರಾಯಿಸಿದ್ದಾರೆ. 

ರವಿವಾರ ನಗರದ ಬೆಂಗಳೂರು ತಮಿಳು ಸಂಘಮ್‌ನಲ್ಲಿ ನೂತನ ಶಿಕ್ಷಣ ನೀತಿ, ನೀಟ್ ಪರೀಕ್ಷೆ, ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿಯ ಕುರಿತು ವಿಚಾರ ಮಂಡಿಸಿದ ಅವರು, ಕೇಂದ್ರ ಸರಕಾರ ಸಾರ್ವಜನಿಕರ ಅಭಿಪ್ರಾಯ ಪಡೆಯದೆ, ಒಕ್ಕೂಟ ವ್ಯವಸ್ಥೆಗೆ ಮಾನ್ಯತೆ ಕೊಡದ ರೀತಿಯಲ್ಲಿ ಶಿಕ್ಷಣ ನೀತಿಗಳನ್ನು ಜಾರಿ ಮಾಡಲು ಹೊರಟ್ಟಿದ್ದಾರೆ. ಇದು ದೇಶದ ಬಹುಭಾಷಾ, ಬಹುಭಾಷ ಸಂಸ್ಕೃತಿಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಎಚ್ಚರಿಸಿದರು.

ಹಿರಿಯ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ರೂಪಿತಗೊಂಡಿರುವ ಹೊಸ ಶಿಕ್ಷಣ ನೀತಿಯ ಕರಡನ್ನು ಮಾನವ ಸಂಪನ್ಮೂಲ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಿ, ಕೇವಲ ಒಂದು ತಿಂಗಳ ಮಟ್ಟಿಗೆ ಮಾತ್ರ ಸಾರ್ವಜನಿಕರ ಅಭಿಪ್ರಾಯಕ್ಕೆ ಅವಕಾಶ ಕಲ್ಪಿಸಿತ್ತು ಹಾಗೂ ನೂತನ ಶಿಕ್ಷಣ ನೀತಿಯ ಕರಡು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪ್ರಕಟಿಸಲಾಗಿದೆ. ಕೇಂದ್ರ ಸರಕಾರದ ಈ ಕ್ರಮ ಸರ್ವಾಧಿಕಾರ ಧೋರಣೆ ಹಾಗೂ ಹಿಂದಿಯೇತರ ಪ್ರಾದೇಶಿಕ ಭಾಷೆಗಳನ್ನು ತಿರಸ್ಕರಿಸುವುದೇ ಆಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ನೂತನ ಶಿಕ್ಷಣ ನೀತಿಯಲ್ಲಿರುವ ಅಂಶಗಳನ್ನು ಒಂದೊಂದಾಗಿ ಗಮನಿಸುತ್ತಾ ಹೋದರೆ, ಬ್ರಾಹ್ಮಣೇತರ ಸಮುದಾಯಗಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದೇ ಸ್ಪಷ್ಟ ಗುರಿಯಾಗಿದೆ. ಶಿಕ್ಷಣ ನೀತಿಯಲ್ಲಿ 30ಮಕ್ಕಳಗಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚಬೇಕು. ಹಾಗೂ ಒಂದಷ್ಟು ಹಳ್ಳಿಗಳಿಗೆ ಕಾಂಪ್ಲೆಕ್ಸ್ ಮಾದರಿಯಲ್ಲಿ ಶಾಲೆವೊಂದನ್ನು ತೆರೆಯುವುದು. ಅಲ್ಲಿ ಅಕ್ಷರ ಕಲಿಕೆ, ಜ್ಞಾನದ ಅಭಿವೃದ್ಧಿ, ಮಾನವೀಯ ವೌಲ್ಯಗಳನ್ನು ಕಲಿಸುವುದಕ್ಕಿಂತ ಬಂಡವಾಳಶಾಹಿಗಳಿಗೆ ಅಗತ್ಯವಾದ ಮರಕೆಲಸ, ವೈರಿಂಗ್ ಸೇರಿದಂತೆ ಮತ್ತಿತರ ಸಣ್ಣಪುಟ್ಟ ಕೆಲಸಗಳಿಗೆ ಸೀಮಿತಗೊಳಿಸುವ ಹುನ್ನಾರ ಅಡಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಈಗಿರುವ ಶಿಕ್ಷಣದ ನೀತಿಯಲ್ಲಿ ಯಾವುದೇ ಮಗುವನ್ನು 9ನೆ ತರಗತಿವರೆಗೆ ಅನುತ್ತೀರ್ಣಗೊಳಿಸಬಾರದೆಂದು ಕಡ್ಡಾಯಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಹಾಗೂ ಬಡವರು ಮಕ್ಕಳು ತರಗತಿಯಲ್ಲಿ ಕುಳಿತು, ಹಂತ, ಹಂತವಾಗಿ ಕಲಿಯುವಂತಹ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ, ಹೊಸ ಶಿಕ್ಷಣ ನೀತಿಯಲ್ಲಿ ಒಂದನೇ ತರಗತಿಯಿಂದಲೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಶೋಷಿತ, ಹಿಂದುಳಿದ ಸಮುದಾಯದ ಮಕ್ಕಳ ಶಿಕ್ಷಣದಿಂದ ವಂಚಿತವಾಗುವ ಅಪಾಯವಿದೆ ಎಂದು ಅವರು ಹೇಳಿದರು.

ತಮಿಳುನಾಡಿನಲ್ಲಿ ಹಲವು ದಶಕಗಳ ಹಿಂದೆಯೇ ಮಧ್ಯಾಹ್ನದ ಬಿಡಿಯೂಟವನ್ನು ಕಾಲೇಜು ಮಟ್ಟದವರೆಗೆ ಕೊಡಲಾಗುತ್ತಿದೆ. ಕರ್ನಾಟಿಕದಲ್ಲೂ ಇದು ಪ್ರಾರಂಭಗೊಂಡಿದೆ. ಇಂತಹ ಕಾರ್ಯಕ್ರಮಗಳಿಂದ ತರಗತಿಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಹೊಸ ಶಿಕ್ಷಣ ನೀತಿಯಲ್ಲಿ ಕೇವಲ 5ನೇ ತರಗತಿವರೆಗೆ ಮಾತ್ರ ಬಿಸಿಯೂಟವನ್ನು ಸೀಮಿತಗೊಳಿಸಲಾಗಿದೆ ಎಂದು ಅವರು ಹೇಳಿದರು.

ದೇಶದ ಅಂಕಿ ಅಂಶದ ಪ್ರಕಾರ ಒಂದು ಸಾವಿರ ಜನತೆಗೆ ಒಬ್ಬ ವೈದ್ಯರು ಸಿಕ್ಕುವುದಿಲ್ಲ. ಆದರೆ, ತಮಿಳುನಾಡಿನಲ್ಲಿ ಒಂದು ಸಾವಿರ ಜನತೆಗೆ 4ವೈದ್ಯರಿದ್ದಾರೆ. ಆದರೆ, ಕೇಂದ್ರ ಸರಕಾರ ನೀಟ್ ಪರೀಕ್ಷೆಯನ್ನು ಜಾರಿ ಮಾಡಿದ ನಂತರ ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಾರೆ. ನೀಟ್ ಪರೀಕ್ಷೆಯ ಪಠ್ಯಗಳು ಹೊಸದಾಗಿಯೆ ಇರುವುದರಿಂದ ವಿಶೇಷ ತರಬೇತಿ ಪಡೆಯಬೇಕಾಗುತ್ತದೆ. ಇದು ದುಬಾರಿ ವೆಚ್ಚವಾಗುತ್ತದೆ. ಹೀಗಾಗಿ ಗ್ರಾಮೀಣ, ಶೋಷಿತ ಹಾಗೂ ಹಿಂದುಳಿದ ಸಮುದಾಯದ ಮಕ್ಕಳು ನೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ.

-ಜೆ.ಕರುಣಾನಿಧಿ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಒಕ್ಕೂಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News