ಭಾರತದ ಪರವಾಗಿ ವಾದಿಸಲು ದೇಶೀಯ ವಕೀಲರ ಅಗತ್ಯವಿದೆ: ನ್ಯಾ. ಡಾ.ದಲ್ವೀರ್ ಭಂಡಾರಿ

Update: 2019-08-25 17:59 GMT

ಬೆಂಗಳೂರು, ಆ.25: ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಭಾರತದ ಪರವಾಗಿ ವಾದಿಸುವ ವಕೀಲರ ಅಗತ್ಯವಿದ್ದು, ಯುವ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು ಈ ಬಗ್ಗೆ ಗಮನಹರಿಸಬೇಕೆಂದು ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿ ಡಾ.ದಲ್ವೀರ್ ಭಂಡಾರಿ ಸಲಹೆ ನೀಡಿದ್ದಾರೆ. 

ರವಿವಾರ ನಗರದ ಖಾಸಗಿ ಹೋಟೇಲ್‌ನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ತೀರ್ಪುಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಯಾವುದೇ ವ್ಯಾಜ್ಯಗಳು ವಿಚಾರಣೆಗೆ ಬಂದಾಗ ಭಾರತದ ಪರವಾಗಿ ವಾದಿಸಲು ನಾವು ಅಮೆರಿಕ ಮತ್ತು ಫ್ರೆಂಚ್‌ನ ವಕೀಲರನ್ನು ಆಶ್ರಯಿಸಬೇಕಾಗಿದೆ. ಇತ್ತೀಚಿಗೆ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿದ್ದ ಭಾರತದ ಕುಲಭೂಷಣ್ ಜಾಧವ್ ಅವರ ಪ್ರಕರಣಗಳಲ್ಲಿ ಭಾರತೀಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದನ್ನು ಹೊರತುಪಡಿಸಿದರೆ, ಬಹುತೇಕ ಪ್ರಕರಣಗಳಲ್ಲಿ ನಾವು ವಿದೇಶಿ ವಕೀಲರನ್ನೇ ಆಶ್ರಯಿಸಬೇಕಿದೆ ಎಂದರು.

ಭಾರತದ ವಕೀಲರಲ್ಲಿ ಪ್ರತಿಭೆ, ಪರಿಶ್ರಮಕ್ಕೆ ಕೊರತೆ ಇಲ್ಲ. ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ದೇಶವನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಗಮನಹರಿಸಿದರೆ ಸಾಕು. ಬಹಳಷ್ಟು ವ್ಯಾಜ್ಯಗಳಲ್ಲಿ ನಮಗೆ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.

ಲೋಕಾಯುಕ್ತರಾದ ನ್ಯಾ.ವಿಶ್ವನಾಥ್‌ ಶೆಟ್ಟಿ ಮಾತನಾಡಿ, ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ತೀರ್ಪುಗಳ ಅನುಷ್ಠಾನ ಮತ್ತು ಅನಂತರ ಎರಡು ದೇಶಗಳ ನಡುವಿನ ಸೌಹಾರ್ದತೆ ಬಗ್ಗೆ ಚರ್ಚೆಯಾಗಬೇಕೆಂದು ತಿಳಿಸಿದರು.

ಲೋಕಸಭೆ ಮಾಜಿ ಪ್ರಧಾನಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಮಾತನಾಡಿ, ಯಾವುದೇ ವ್ಯಾಜ್ಯಗಳಿಗೆ ಯುದ್ಧಗಳಿಂದ ಪರಿಹಾರ ದೊರಕಿಸಲು ಸಾಧ್ಯವಿಲ್ಲ. ಅಲ್ಲದೆ, ಅಂತಾರಾಷ್ಟ್ರೀಯ ವ್ಯಾಜ್ಯಗಳನ್ನು ಬಗೆಹರಿಸಲು ಕಾನೂನು ಚೌಕಟ್ಟಿನಲ್ಲೇ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ನ್ಯಾಯಮೂರ್ತಿಗಳಾದ ಗೋಪಾಲಗೌಡ, ಶ್ರೀಧರ್‌ರಾವ್, ಅಶೋಕ್ ಇಂಚಗೇರಿ, ಕರ್ನಾಟಕ ಆಡಳಿತ ನ್ಯಾಯಮಂಡಳಿ ಅಧ್ಯಕ್ಷ ಡಾ.ನ್ಯಾ.ಭಕ್ತವತ್ಸಲ, ಕರ್ನಾಟಕ ಬಾರ್ ಕೌನ್ಸಿಲ್‌ನ ಅಧ್ಯಕ್ಷ ಕೃಷ್ಣಪ್ಪ, ಭೀಮಪ್ಪ ನಾಯಕ್, ಹಿರಿಯ ವಕೀಲರಾದ ವೈ.ಆರ್.ಸದಾಶಿವರೆಡ್ಡಿ, ಎ.ಸಿ.ಮಹೇಶ್ವರಿ, ಪಿ.ಎನ್.ಸಿನ್ಹಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News