ಬೆಂಗಳೂರು ವಿಶ್ವವಿದ್ಯಾಲಯ: ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಸಿದ್ಧತೆ

Update: 2019-08-25 18:00 GMT

ಬೆಂಗಳೂರು, ಆ.25: ನಗರದ ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 50 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ.

ವಿವಿಯಲ್ಲಿ ಹಲವು ಕುಂದುಕೊರತೆಗಳಿಂದ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ವಿವಿಯು ವಿವಿಧ ಕಾಮಗಾರಿಗಳನ್ನು ಮಾಡುವ ಮೂಲಕ ವಿವಿ ಅಭಿವೃದ್ಧಿಗೆ ಮುಂದಾಗಿದೆ.

ಅದರಲ್ಲಿ ಆಸ್ತಿ ಪಾಸ್ತಿ ರಕ್ಷಣೆಗಾಗಿ ಕಾಂಪೌಂಡ್, ಪರಿಸರ ಸ್ನೇಹಿ ಗ್ರಂಥಾಲಯ, ಶೌಚಗೃಹ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಸೇರಿದಂತೆ 13 ವಿವಿಧ ಯೋಜನೆ ಕೈಗೆತ್ತಿಕೊಳ್ಳಲು ಇತ್ತೀಚಿಗೆ ನಡೆದ ಸಭೆಯಲ್ಲಿ ಕಾರ್ಯ ಸಮಿತಿ ತೀರ್ಮಾನಿಸಿದೆ. ಕಾರ್ಯ ಸಮಿತಿಯ ನಿರ್ಣಯಕ್ಕೆ ಸಿಂಡಿಕೇಟ್‌ನಲ್ಲಿಯೂ ಹಸಿರುನಿಶಾನೆ ಸಿಕ್ಕಿದ್ದರಿಂದ ಶೀಘ್ರದಲ್ಲಿಯೇ ಯೋಜನೆಗಳಿಗೆ ಚಾಲನೆ ಸಿಗಲಿದೆ.

ವಿವಿಯು 13 ಯೋಜನೆಗಳಿಗೆ 50.62 ಕೋಟಿ ರೂ.ಗಳಷ್ಟು ವೆಚ್ಚ ಮಾಡುತ್ತಿದೆ. ಅದರಲ್ಲಿ ಎರಡು ಯೋಜನೆಗಳಿಗೆ 31.24 ಕೋಟಿ ರೂ.ಗಳಷ್ಟು ಖರ್ಚು ಮಾಡುತ್ತಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣ, ಸೆಮಿನಾರ್ ಹಾಲ್ ಮತ್ತು ಬೋರ್ಡ್ ರೂಂ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಕಾಂಪೌಂಡ್, ಪಿಜಿ-5 ಹಾಸ್ಟೆಲ್ ಶೌಚಗೃಹ, ನೀರಿನ ಸಂಪರ್ಕ ವ್ಯವಸ್ಥೆ, ದೈಹಿಕ ಶಿಕ್ಷಣ ಹಾಸ್ಟೆಲ್-ನೂತನ ಶೌಚಗೃಹ, ಗ್ರಾನೈಟ್ ಪ್ಲೋರಿಂಗ್, ಗಾಂಧಿ ಭವನ ನವೀಕರಣ ಮಾಡಲಾಗುತ್ತಿದೆ.

ಜತೆಗೆ ವಿವಿ ಆಡಳಿತ ಕಚೇರಿ ಬಳಿ ಪಾರ್ಕಿಂಗ್ ಸ್ಥಳ ನಿರ್ಮಾಣ, ಗ್ರಂಥಾಲಯ ಕಟ್ಟಡ ಸುತ್ತಮುತ್ತ ಪಾರ್ಕ್, ಮುಳ್ಳಿನ ತಂತಿ ಬೇಲಿ ಹಾಕುವುದು, ಯುವಿಸಿಇ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ, ಯುವಿಸಿಇ ಬಾಲಕರ ಹಾಸ್ಟೆಲ್ ಬ್ಲಾಕ್ ನಿರ್ಮಾಣ, ವಿವಿ ಆಸ್ತಿ ಸಂರಕ್ಷಣೆಗೆ ವಿವಿಧ ಕ್ರಮ, ಪಿಎಚ್‌ಡಿ ಹಾಸ್ಟೆಲ್‌ಗಳಿಗೆ ಕುಡಿಯುವ ನೀರಿನ ಸೌಕರ್ಯ, ವಸತಿ ಗೃಹಗಳ ಒಳಚರಂಡಿ ರಿಪೇರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News