ಜಮ್ಮುಕಾಶ್ಮೀರದ ಹೆಚ್ಚಿನ ಪ್ರದೇಶಗಳಲ್ಲಿ ಲ್ಯಾಂಡ್‌ಲೈನ್ ದೂರವಾಣಿ ಸೇವೆ ಮರು ಆರಂಭ

Update: 2019-08-25 18:08 GMT

ಶ್ರೀನಗರ, ಆ. 25: ಕಾಶ್ಮೀರದಲ್ಲಿ ಸಂವಹನ ನಿರ್ಬಂಧವನ್ನು ಸ್ಪಲ್ಪ ಮಟ್ಟಿಗೆ ಸಡಿಲಿಸಲಾಗಿದೆ. ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಕಣಿವೆಯ ಹೆಚ್ಚಿನ ಸ್ಥಳಗಳಲ್ಲಿ ದೂರವಾಣಿ ಸೇವೆ ಮರು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಶನಿವಾರ ಕಣಿವೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಸಂವಹನ ನಿರ್ಬಂಧ ಸಡಿಲಿಸಲಾಗಿದೆ. ಕಣಿವೆಯಾದ್ಯಂತ ಸ್ಥಿರ ದೂರವಾಣಿ ಸೇವೆ ಮರು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರದಲ್ಲಿರುವ ದೂರವಾಣಿ ವಿನಿಮಯ ಕೇಂದ್ರ ಸೇರಿದಂತೆ ನಿಗದಿತ ಲೈನ್‌ಗಳ ಫೋನ್ ಸೇವೆ ನೀಡುತ್ತಿರುವ ಇನ್ನೂ ಕೆಲವು ದೂರವಾಣಿ ವಿನಿಮಯ ಕೇಂದ್ರಗಳು ಶನಿವಾರ ಸೇವೆ ಮರು ಆರಂಭಿಸಿವೆ. ಸ್ಥಿರ ದೂರವಾಣಿ ಸಂಪರ್ಕವನ್ನು ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಪೂರ್ಣವಾಗಿ ಮರು ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಇನ್ನಷ್ಟು ದೂರವಾಣಿ ಲೈನ್‌ಗಳನ್ನು ಮರು ಆರಂಭಿಸಲಾಗುವುದು.

ಆದರೆ, ವಾಣಿಜ್ಯ ಕೇಂದ್ರವಾದ ಇಲ್ಲಿನ ಲಾಲ್ ಚೌಕ ಹಾಗೂ ಪ್ರೆಸ್ ಎನ್‌ಕ್ಲೇವ್‌ನಲ್ಲಿ ದೂರವಾಣಿ ಸೇವೆ ಸ್ಥಗಿತಗೊಳಿಸಿರುವುದನ್ನು ಮುಂದುವರಿಸಲಾಗಿದೆ. 5,300 ಸ್ಥಿರ ದೂರವಾಣಿಗಳನ್ನು ಹೊಂದಿರುವ ಇನ್ನೂ 8 ದೂರವಾಣಿ ವಿನಿಮಯ ಕೇಂದ್ರಗಳನ್ನು ಈ ವಾರಾಂತ್ಯದಲ್ಲಿ ಮರು ಆರಂಭಿಸಲಾಗುವುದು ಎಂದು ಪ್ರಾಥಮಿಕ ಕಾರ್ಯದರ್ಶಿ ಹಾಗೂ ಸರಕಾರದ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ. ಆದರೆ, ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಸೇರಿದಂತೆ ಮೊಬೈಲ್ ಟೆಲಿಫೋನ್ ಸೇವೆಗಳು, ಇಂಟರ್ ನೆಟ್ ಹಾಗೂ ಖಾಸಗಿ ಗುತ್ತಿಗೆಯ ಇಂಟರ್‌ನೆಟ್ ಸೇವೆಗಳು ಈಗಲೂ ಲಭ್ಯವಿಲ್ಲ.

ಕಣಿವೆಯ ಹೆಚ್ಚಿನ ಪ್ರದೇಶಗಳಲ್ಲಿನ ನಿರ್ಬಂಧ ಹಿಂಪಡೆಯಲಾಗಿದೆ. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ಭದ್ರತಾ ಪಡೆ ನಿಯೋಜನೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News