ಕುಸಿಯುತ್ತಿರುವ ಬೇಡಿಕೆ: 3,000 ಉದ್ಯೋಗಿಗಳನ್ನು ಕೈಬಿಟ್ಟ ಮಾರುತಿ ಸುಝುಕಿ

Update: 2019-08-27 16:14 GMT

ಹೊಸದಿಲ್ಲಿ,ಆ.27: ಭಾರತೀಯ ಮಾರುಕಟ್ಟೆಯಲ್ಲಿ ಮಂದಗತಿಯ ಬೇಡಿಕೆಯಿಂದಾಗಿ ತನ್ನ ವಾಹನಗಳ ಮಾರಾಟವು ಕುಸಿದಿರುವ ಹಿನ್ನೆಲೆಯಲ್ಲಿ ದೇಶದ ಬೃಹತ್ ಕಾರು ತಯಾರಿಕೆ ಕಂಪೆನಿ ಮಾರುತಿ ಸುಝುಕಿ 3,000 ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಸಿ.ಭಾರ್ಗವ ಅವರು ತಿಳಿಸಿದ್ದಾರೆ.

  ಮಂಗಳವಾರ ಕಂಪೆನಿಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು,ದೇಶದ ನೂತನ ವಾಯುಮಾಲಿನ್ಯ ಮಾನದಂಡಗಳನ್ನು ಪೂರೈಸಲು ಕಂಪೆನಿಯು ಪ್ರಯತ್ನಿಸುತ್ತಿದೆ ಹಾಗೂ ಶೀಘ್ರವೇ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಚಾಲಿತ ಮತ್ತು ಹೈಬ್ರಿಡ್ ಕಾರುಗಳನ್ನು ಉತ್ಪಾದಿಸಲಿದೆ. ಸಿಎನ್‌ಜಿ ವಾಹನಗಳ ಸಂಖ್ಯೆಯನ್ನು ಈ ವರ್ಷ ಶೇ.50ರಷ್ಟು ಹೆಚ್ಚಿಸಲು ಕಂಪನಿಯು ಯೋಜಿಸಿದೆ ಎಂದು ತಿಳಿಸಿದರು.

ಭಾರತದ ಆಟೊಮೊಬೈಲ್ ಕ್ಷೇತ್ರವು ಜುಲೈನಲ್ಲಿ ಸತತ ಒಂಭತ್ತನೇ ತಿಂಗಳಿಗೆ ಮಾರಾಟ ಕುಸಿತವನ್ನು ದಾಖಲಿಸಿದ್ದು, ಇದು 2000,ಡಿಸೆಂಬರ್ ಬಳಿಕ ಅತ್ಯಂತ ತೀವ್ರ ಮಾರಾಟ ಕುಸಿತವಾಗಿದೆ. ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅದೇ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.30.9 ಮತ್ತು ಕಾರುಗಳ ಮಾರಾಟ ಶೇ.35.95ರಷ್ಟು ಕುಸಿದಿದೆ.

ಮಾರುತಿಯು ಸಣ್ಣ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಎಪ್ರಿಲ್ 2020ರಿಂದ ನಿಲ್ಲಿಸಲಿದ್ದು, ಅವುಗಳ ಬದಲಾಗಿ ಸಿಎನ್‌ಜಿ ಚಾಲಿತ ಕಾರುಗಳ ತಯಾರಿಕೆಯತ್ತ ಹೆಚ್ಚು ಗಮನ ಹರಿಸುತ್ತಿದೆ. ಬಿಎಸ್-VI ವಾಯುಮಾಲಿನ್ಯ ಮಾನದಂಡಗಳು ಎಪ್ರಿಲ್ 2020ರಿಂದ ಅನುಷ್ಠಾನಗೊಳ್ಳಲಿವೆ. ಸದ್ಯಕ್ಕೆ ಮಾರುತಿ ಸುಝುಕಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಎಲ್ಲ ಕಾರುಗಳ ಪೈಕಿ ಶೇ.23ರಷ್ಟು ಡೀಸೆಲ್ ಚಾಲಿತವಾಗಿವೆ.

ಕಂಪೆನಿಯು 2019 ಎಪ್ರಿಲ್-ಜುಲೈ ಅವಧಿಯಲ್ಲಿ 4,74,487 ವಾಹನಗಳನ್ನು ಮಾರಾಟ ಮಾಡಿದ್ದರೆ,ಕಳೆದ ವರ್ಷದ ಇದೇ ಅವಧಿಯಲ್ಲಿ 6,17,990 ವಾಹನಗಳನ್ನು ಮಾರಾಟ ಮಾಡಿತ್ತು. ಇದು ಮಾರಾಟದಲ್ಲಿ ಶೇ.23.2ರಷ್ಟು ಕುಸಿತವನ್ನು ಸೂಚಿಸುತ್ತದೆ. ಕಂಪೆನಿಯು ಈವರೆಗೆ ಐದು ಲಕ್ಷಕ್ಕೂ ಅಧಿಕ ಸಿಎನ್‌ಜಿ ವಾಹನಗಳನ್ನು ಮಾರಾಟ ಮಾಡಿದೆ.

 ಆಟೊಮೊಬೈಲ್ ಕ್ಷೇತ್ರವು ತೀರ ಸಂಕಷ್ಟ ಸ್ಥಿತಿಯಲ್ಲಿದ್ದು,ಕಳೆದ ತ್ರೈಮಾಸಿಕದಲ್ಲಿ 15,000 ನೌಕರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಕಳೆದ 18 ತಿಂಗಳುಗಳಲ್ಲಿ ಸುಮಾರು 300 ಕಾರು ವಿತರಕ ಸಂಸ್ಥೆಗಳು ಬಾಗಿಲೆಳೆದುಕೊಂಡಿವೆ. ಗ್ರಾಹಕರ ವಿಶ್ವಾಸ ಇಳಿಮುಖ,ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಎದುರಿಸುತ್ತಿರುವ ಬಿಕ್ಕಟ್ಟು ಇವು ಪ್ರಯಾಣಿಕ ಕಾರು ಮಾರಾಟಗಳಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News