ಸರಕಾರಕ್ಕೆ ತಲೆನೋವಾಗಲಿರುವ ಮೂರು ಉಪಮುಖ್ಯಮಂತ್ರಿಗಳು

Update: 2019-08-28 05:09 GMT

‘‘ನಮ್ಮ ಸರಕಾರ ರಾಜ್ಯಕ್ಕೆ ಮೂರು ಉಪಮುಖ್ಯಮಂತ್ರಿಗಳನ್ನು ನೀಡಿದೆ. ಇದು ಪಕ್ಷದ ಹೆಗ್ಗಳಿಕೆ’ ಬಹುಶಃ ಮುಂದೊಂದು ದಿನ ಬಿಜೆಪಿ ತನ್ನ ಸಾಧನೆಯಾಗಿ ಇಂತಹದೊಂದು ಹೇಳಿಕೆಯನ್ನು ನೀಡಿದರೆ ಅಚ್ಚರಿಯೇನೂ ಇಲ್ಲ. ಬಹುಶಃ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರು ಉಪಮುಖ್ಯಮಂತ್ರಿಗಳನ್ನು ಕಾಣುವ ಭಾಗ್ಯ ಜನರಿಗೆ ದೊರಕಿದೆ. ಈ ಹಿಂದೆ ಬಿಜೆಪಿ ನೇತೃತ್ವದ ಸರಕಾರದಲ್ಲೇ ಎರಡು ಉಪ ಮುಖ್ಯಮಂತ್ರಿಗಳ ಸೃಷ್ಟಿಯಾಗಿತ್ತು. ಇದೀಗ ಅದಕ್ಕೆ ಇನ್ನೊಂದು ಸೇರ್ಪಡೆಯಾಗಿದೆ. ಇದಕ್ಕೆ ಹೋಲಿಸಿದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವೇ ಮೇಲು. ಸ್ಥಾನಕ್ಕಾಗಿ ನಿಜವಾದ ಅರ್ಥದಲ್ಲಿ ಅವರೊಳಗೆ ಪೈಪೋಟಿ ನಡೆಯಬೇಕಾಗಿತ್ತು. ಎರಡು ಪಕ್ಷಗಳು ಜೊತೆಗೆ ಸೇರಿ ಆಡಳಿತ ನಡೆಸುವಾಗ ಹಲವರನ್ನು ಸಮಾಧಾನಿಸಲು ಸ್ಥಾನಗಳು ಸೃಷ್ಟಿಯಾಗುವುದು ಸಹಜ. ಆದರೆ ಆ ಮಟ್ಟಿಗೆ ಸರಕಾರದ ಘನತೆಯನ್ನು ಮೈತ್ರಿ ಸರಕಾರ ಉಳಿಸಿಕೊಂಡಿತ್ತು. ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ ಒಮ್ಮೆ ಈ ನಾಡಿನ ಮುಖ್ಯಮಂತ್ರಿಯಾಗಿದ್ದ ಶೆಟ್ಟರ್, ಇದೀಗ ಕೈಗಾರಿಕಾ ಸಚಿವರಾಗಿ ಹಿಂಭಡ್ತಿ ಪಡೆದಿರುವುದು. ಸಾಧಾರಣವಾಗಿ ಮುಖ್ಯಮಂತ್ರಿಯಂತಹ ಉನ್ನತ ಸ್ಥಾನವನ್ನು ನಿರ್ವಹಿಸಿದವರು, ಬಳಿಕ ಅದಕ್ಕಿಂತ ಕೆಳಗಿನ ಸ್ಥಾನವನ್ನು ಪಡೆಯಲು ಹಿಂಜರಿಯುತ್ತಾರೆ. ಈ ಹಿಂದೆ ತಾನು ಪಡೆದ ಗೌರವಕ್ಕೆ ಅದರಿಂದಾಗಿ ಕುಂದುಂಟಾಗಬಹುದು ಎನ್ನುವ ಆತಂಕ ಅವರಲ್ಲಿರುತ್ತದೆ. ಆದರೆ ಶೆಟ್ಟರ್ ಯಾವ ಮುಜುಗರವೂ ಇಲ್ಲದೆ ‘ಸಿಕ್ಕಿದ್ದು ಸೀರುಂಡೆ’ ಎಂಬಂತೆ ಸಚಿವ ಸ್ಥಾನವನ್ನು ಸ್ವೀಕರಿಸಿದ್ದಾರೆ. ಬಿಜೆಪಿಯ ಹಿರಿಯರೆಂದು ಗುರುತಿಸಲ್ಪಟ್ಟ ಶೆಟ್ಟರ್, ಈಶ್ವರಪ್ಪ, ಅಶೋಕ್ ಇವರನ್ನು ಬದಿಗೆ ಸರಿಸಿ ಕಾರಜೋಳ, ಅಶ್ವತ್ಥನಾರಾಯಣ ಮತ್ತು ಲಕ್ಷಣ ಸವದಿ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಿರುವುದು ಇನ್ನೊಂದು ಪ್ರಮುಖ ಬೆಳವಣಿಗೆ. ದಿಲ್ಲಿಯಲ್ಲಿ ಕುಳಿತು ಆರೆಸ್ಸೆಸ್ ನಾಯಕ ಸಂತೋಷ್ ನಿಧಾನಕ್ಕೆ ರಾಜ್ಯ ರಾಜಕೀಯದ ಮೇಲೆ ಹಿಡಿತ ಸಾಧಿಸುತ್ತಿರುವುದರ ಸೂಚನೆಯಿದು. ದೊಡ್ಡ ವ್ಯಂಗ್ಯವೆಂದರೆ, ‘ಉಪಮುಖ್ಯಮಂತ್ರಿ ಸ್ಥಾನ’ವನ್ನು ಕೊಟ್ಟರೂ ಸ್ವೀಕರಿಸುತ್ತಿರಲಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ‘ಉಪಮುಖ್ಯಮಂತ್ರಿಯೆನ್ನುವುದು ಸಾಂವಿಧಾನಿಕ ಹುದ್ದೆಯಲ್ಲ. ಕೇವಲ ಗೌರವ ನೀಡುವ ಉದ್ದೇಶದಿಂದ ಸೃಷ್ಟಿಯಾಗಿರುವುದು’ ಎಂದು ಅವರು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಮಾತಿನಲ್ಲಿ ಸತ್ಯಾಂಶವಿಲ್ಲದೇ ಇಲ್ಲ. ಆದರೆ ಗೌರವ ನೀಡುವ ಉದ್ದೇಶದಿಂದ ಸೃಷ್ಟಿಯಾಗಿರುವುದಲ್ಲ, ಅಸಮಾಧಾನವನ್ನು ತಣಿಸುವುದಕ್ಕಾಗಿ ಸೃಷ್ಟಿಯಾಗಿರುವ ಸ್ಥಾನವದು. ಒಬ್ಬ ಉಪಮುಖ್ಯಮಂತ್ರಿಯಾಗಿ ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳಿಗೆ ಸಾಂವಿಧಾನಿಕ ಸ್ಥಾನಮಾನಗಳಿರುವುದಿಲ್ಲ. ಇದೊಂದು ರೀತಿಯಲ್ಲಿ ಸರಕಾರಕ್ಕೆ ಹೆಚ್ಚುವರಿ ಹೊರೆಯೇ ಆಗಿದೆ. ತನ್ನ ಸುತ್ತಮುತ್ತ ಓಡಾಡುವ ಈ ಉಪಮುಖ್ಯಮಂತ್ರಿಗಳಿಂದಾಗಿ ಮುಖ್ಯಮಂತ್ರಿಗೆ ಆಡಳಿತ ನಡೆಸುವುದು ಕಷ್ಟವಾಗುತ್ತದೆಯೇ ಹೊರತು, ಉಳಿದಂತೆ ಯಾವ ಪ್ರಯೋಜನವೂ ಇಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದೇ ದಿಲ್ಲಿ ವರಿಷ್ಠರಿಗೆ ಇಷ್ಟದ ಸಂಗತಿಯಾಗಿರಲಿಲ್ಲ. ವೈಯಕ್ತಿಕ ವರ್ಚಸ್ಸು ಇಲ್ಲದೇ ಇದ್ದರೆ ಯಡಿಯೂರಪ್ಪ ಎಂದೋ ಬಿಜೆಪಿಯ ಕಸದ ಬುಟ್ಟಿ ಸೇರುತ್ತಿದ್ದರು. ಸರಕಾರ ರಚನೆಯಾದ ಬಳಿಕವೂ ಸಂಪುಟ ವಿಸ್ತರಣೆಗೆ ವರಿಷ್ಠರೇ ಅಡ್ಡಿಯಾದರು. ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವುದು ಯಡಿಯೂರಪ್ಪರಿಗೆ ಬೇಡವಾಗಿತ್ತು. ಆದರೆ ವರಿಷ್ಠರ ಒತ್ತಡಕ್ಕೆ ಅವರು ಅನಿವಾರ್ಯವಾಗಿ ಮಣಿಯಬೇಕಾಯಿತು. ಈ ಮೂರು ಸ್ಥಾನಗಳನ್ನು ಸೃಷ್ಟಿಸಿರುವುದು ಯಡಿಯೂರಪ್ಪ ಅವರಿಗೆ ಕಿರುಕುಳವನ್ನು ನೀಡುವುದಕ್ಕೇ ಹೊರತು ಸರಕಾರವನ್ನು ಸುಗಮವಾಗಿ ನಡೆಸುವುದಕ್ಕೆ ಅಲ್ಲ. ಜೊತೆಗೆ, ಸರಕಾರದೊಳಗೆ ತನ್ನ ಪ್ರಾಬಲ್ಯವನ್ನು ಮೆರೆಯುವುದಕ್ಕಾಗಿ ಸಂತೋಷ್ ಈ ಸ್ಥಾನಗಳನ್ನು ಬಳಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನ ಅಸಾಂವಿಧಾನಿಕವಾಗಿರಬಹುದು. ಆದರೆ, ಒಬ್ಬ ಮುಖ್ಯಮಂತ್ರಿಗೆ ನೀಡುವ ಎಲ್ಲ ಸವಲತ್ತುಗಳನ್ನು ಅವರಿಗೆ ನೀಡಲಾಗುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಆಡಳಿತದಲ್ಲಿ ಯಾವ ರೀತಿಯಲ್ಲೂ ಭಾಗವಹಿಸದ, ಪಕ್ಷದ ಭಿನ್ನಮತವನ್ನು ತಣಿಸುವುದಕ್ಕಾಗಿಯೇ ರಚನೆಯಾಗಿರುವ ಈ ಉಪಮುಖ್ಯಮಂತ್ರಿ ಹುದ್ದೆಗಳಿಗಾಗಿ ಜನಸಾಮಾನ್ಯರ ಹಣವನ್ನು ವ್ಯಯ ಮಾಡಲಾಗುತ್ತದೆ. ಇದು ಎಷ್ಟರಮಟ್ಟಿಗೆ ಸರಿ? ಈ ಹಿಂದೆಲ್ಲ ಒಬ್ಬ ಉಪಮುಖ್ಯಮಂತ್ರಿಯನ್ನು ನೇಮಕ ಮಾಡುವ ಸಂಪ್ರದಾಯವಿತ್ತು. ಇದು ಒಂದಿಷ್ಟಾದರೂ ಸಹ್ಯ. ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಣೆಗೆ ಇದರಿಂದ ಅನುಕೂಲವಾಗಬಹುದು ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಮೂರು ಉಪಮುಖ್ಯಮಂತ್ರಿಗಳ ನೇಮಕ, ಸಂವಿಧಾನದ ಅಣಕವೇ ಸರಿ. ದುರ್ಬಲ ಸರಕಾರವಷ್ಟೇ ಹೀಗೆ ಸಾಲು ಸಾಲು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುತ್ತದೆ. ಸರಕಾರದ ಭವಿಷ್ಯ ಚಿಂತಾಜನಕವಾಗಿರುವುದನ್ನು ಈ ಮೂರು ಉಪಮುಖ್ಯಮಂತ್ರಿ ಸ್ಥಾನಗಳೇ ಹೇಳುತ್ತವೆ. ಮುಂದಿನ ದಿನಗಳಲ್ಲಿ ಈ ಉಪಮುಖ್ಯಮಂತ್ರಿ ಸ್ಥಾನ ಇನ್ನಷ್ಟು ಹೆಚ್ಚಿದರೆ ಅಚ್ಚರಿಯಿಲ್ಲ. ಇದೇ ಸಂದರ್ಭದಲ್ಲಿ ಮೈತ್ರಿ ಸರಕಾರವನ್ನು ಉರುಳಿಸಿ ‘ಅನರ್ಹ’ ಕಳಂಕವನ್ನು ಮೈಗಂಟಿಸಿಕೊಂಡು ಓಡಾಡುತ್ತಿರುವ ಶಾಸಕರು ಯಡಿಯೂರಪ್ಪ ಅವರಿಗೆ ನುಂಗಲಾರದ ತುತ್ತಾಗಿದ್ದಾರೆ. ಅನರ್ಹ ಶಾಸಕರಿಗಾಗಿಯೇ ಪ್ರಮುಖ ಖಾತೆಗಳನ್ನು ಯಡಿಯೂರಪ್ಪ ಮೀಸಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಇತ್ತ ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಆದೇಶದ ಸಿಂಧುತ್ವ ಪ್ರಶ್ನಿಸಿ ಅನರ್ಹರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಮೀನಮೇಷ ಎಣಿಸುತ್ತಿದೆ. ಕೇಂದ್ರ ವರಿಷ್ಠರ ಪ್ರಭಾವದಿಂದ ಸುಪ್ರೀಂಕೋರ್ಟ್ ಈ ಅನರ್ಹರನ್ನು ಕೈ ಬಿಟ್ಟರೆ, ಸರಕಾರದೊಳಗೆ ಇನ್ನಷ್ಟು ಗೊಂದಲಗಳು ಸೃಷ್ಟಿಯಾಗಲಿವೆ. ಅಷ್ಟೇ ಅಲ್ಲ, ಇದೀಗ ಬಿಜೆಪಿಯೊಳಗೆ ಅಸಮಾಧಾನ ಭುಗಿಲೆದ್ದಿದೆ. ಇದನ್ನು ತಣಿಸುವುದಕ್ಕೆ ಸ್ವತಃ ದಿಲ್ಲಿ ವರಿಷ್ಠರಿಗೇ ಇಷ್ಟವಿಲ್ಲ ಎನ್ನುವುದೂ ಈಗಾಗಲೇ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಸರಕಾರ ಬಹುಮತ ಕಳೆದುಕೊಳ್ಳುವುದು ಸ್ಪಷ್ಟ. ಈ ಸಂದರ್ಭಕ್ಕಾಗಿ ದೇವೇಗೌಡರು ತಮ್ಮ ಮಕ್ಕಳ ಜೊತೆಗೆ ಹೊಂಚು ಹಾಕಿ ಕೂತಿದ್ದಾರೆ. ಒಂದು ವೇಳೆ ಬಿಜೆಪಿಯೊಳಗಿರುವ ಶಾಸಕರು ಕೈ ಕೊಟ್ಟರೆ ಜೆಡಿಎಸ್‌ನ ಬೆಂಬಲವನ್ನು ಪಡೆದು ಸರಕಾರವನ್ನು ಮುನ್ನಡೆಸಲು ಯಡಿಯೂರಪ್ಪ ಹಿಂಜರಿಯಲಾರರು. ಒಟ್ಟಿನಲ್ಲಿ, ಯಡಿಯೂರಪ್ಪರ ಪಾಲಿಗೆ ಬಿಜೆಪಿಯಲ್ಲಿ ಇದು ಕೊನೆಯ ಆಟ. ಈ ಆಟವನ್ನು ಅವರು ಹೇಗೆ ಮುಗಿಸಲಿದ್ದಾರೆ ಎನ್ನುವುದೇ ಕುತೂಹಲಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News