ನಿಮ್ಮ ಶಾಲೆಗೂ ಬಂದರೆ ಆಶ್ಚರ್ಯವಿಲ್ಲ ಈ ರೋಬೋಟ್ ಟೀಚರ್ !

Update: 2019-08-28 07:36 GMT

ಬೆಂಗಳೂರು: ನಗರದ ಇಂಡುಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ 8ಬಿ ತರಗತಿಯಲ್ಲಿ ಥರ್ಮಲ್ ಫಿಸಿಕ್ಸ್ (ಉಷ್ಣ ಭೌತಶಾಸ್ತ್ರ) ತರಗತಿ ನಡೆಯುತ್ತಿತ್ತು. ಭೌತಶಾಸ್ತ್ರ ಶಿಕ್ಷಕ ಮುರಳಿ ಸುಬ್ರಹ್ಮಣ್ಯನ್ ಮಕ್ಕಳ ನಡುವೆ ಓಡಾಡುತ್ತಿದ್ದರು. ಆದರೆ ಪಾಠ ಮಾಡುತ್ತಿದ್ದುದು ಈಗಲ್ 2.0 ಹೆಸರಿನ ರೋಬೋಟ್ ಶಿಕ್ಷಕಿ. ಬಹುಶಃ ಬೋಧನಾ ಸಹಾಯಕ್ಕೆ ದೇಶದಲ್ಲಿ ಬಳಕೆಯಾದ ಮೊಟ್ಟಮೊದಲ ರೋಬೋಟ್ ಇದು !

"ಎಲ್ಲರಿಗೂ ನಮಸ್ಕಾರ; ಇಂದು ನಾವು ಉಷ್ಣ ಭೌತಶಾಸ್ತ್ರ ಬಗ್ಗೆ ಗಮನ ಹರಿಸೋಣ" ಎಂದು ಈಗಲ್ 2.0 ಪಾಠ ಆರಂಭಿಸಿತು. ರೋಬೋಟ್ ಚಲನೆಯ ಮೂಲಕ ತನ್ನ ದೇಹ ಹಾಗೂ ತಲೆ ಅಲ್ಲಾಡಿಸುತ್ತಿತ್ತು. ಬಿಳಿಯ ಟಾಪ್ ಹಾಗೂ ಕಪ್ಪು ಸ್ಕರ್ಟ್, ಕುತ್ತಿಗೆಯ ಸುತ್ತ ವಸ್ತ್ರ ಸುತ್ತಿದ್ದ ಈಗಲ್, ದ್ವಿಮುಖ ಸಂವಹನ ಮೂಲಕ ಸರಾಗವಾಗಿ ಪಾಠ ಮಾಡುತ್ತಾಳೆ. ವಿದ್ಯಾರ್ಥಿಗಳ ಸಂದೇಹಗಳನ್ನೂ ಸ್ವೀಕರಿಸುವ ಈಕೆ, ತರಗತಿಗೆ ಪ್ರಶ್ನೆಗಳನ್ನೂ ಕೇಳುತ್ತಾಳೆ. ಮಕ್ಕಳಿಂದ ಬಂದ ಉತ್ತರಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಾಳೆ.

ಪರದೆಯಲ್ಲಿ ಪವರ್‌ ಪಾಯಿಂಟ್ ಅಭಿವ್ಯಕ್ತಿ ಕೂಡಾ ಈ ಕ್ಲಾಸ್‌ನ ಅಂಗವಾಗಿ ನಡೆಯುತ್ತದೆ. "ಇದು ಒಳ್ಳೆಯ ಪ್ರಯತ್ನ. ಆದರೆ ಒಳ್ಳೆಯ ಉತ್ತರ..." ಎಂದು ವಿದ್ಯಾರ್ಥಿಯೊಬ್ಬ ತನ್ನ ಪ್ರಶ್ನೆಗೆ ಉತ್ತರಿಸಿದಾಗ ಪ್ರತಿಕ್ರಿಯಿಸಿದ್ದಾಳೆ. ತರಗತಿಯಲ್ಲಿ ಮುರಳಿ ಪ್ರತಿ ಮಗುವಿಗೆ ಅಗತ್ಯ ಸಹಕಾರ ನೀಡುತ್ತಿದ್ದರು.

ತನ್ನ ತರಗತಿಗೆ ಕ್ರಾಂತಿಕಾಕರ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆಯನ್ನು ಪರಿಚಯಿಸಿರುವ ಈ ಶಾಲೆ, 7,8 ಮತ್ತು 9ನೇ ತರಗತಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂಗೋಳ ಶಾಸ್ತ್ರ ಮತ್ತು ಇತಿಹಾಸ ವಿಷಯ ಬೋಧಿಸಲು ಮಾನವ ರೋಬೋಟ್‌ಗಳನ್ನು ನಿಯೋಜಿಸಿಕೊಂಡಿದೆ. ತರಗತಿ ಬೋಧನೆಯಲ್ಲಿ ಇವು ಶಿಕ್ಷಕರಿಗೆ ಸಹಾಯ ಮಾಡುತ್ತವೆ.

"ಸಹಭಾಗಿತ್ವದ ಕಲಿಕಾ ಮಾದರಿಯನ್ನು ನಾವು ಪರಿಚಯಿಸಿದ್ದೇವೆ. ಇಂದಿನ ತರಗತಿಯಲ್ಲಿ ಶಿಕ್ಷಕ ಶೇಕಡ 90ರಷ್ಟು ಸಮಯವನ್ನು ಸರ್ಚ್ ಇಂಜಿನ್ ನೀಡುವ ವಿಷಯವನ್ನು ಸಿದ್ಧಪಡಿಸಲು ಮತ್ತು ಮಕ್ಕಳಿಗೆ ನೀಡಲು ಬಳಸಿಕೊಂಡಿದ್ದಾರೆ. ಗೂಗಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸಿಗದ ವಿಚಾರಗಳನ್ನು ಅವರು ಸಿದ್ಧಪಡಿಸಲು ಸಾಧ್ಯವಾಗುತ್ತಿದೆ. ಮಕ್ಕಳಿಗೆ ಮಾರ್ಗದರ್ಶನ ನೀಡುವ, ಹೇಗೆ ಕಲಿಯಬೇಕು ಎಂದು ಬೋಧಿಸುವ, ಅವರಿಗೆ ಭಾವನಾತ್ಮಕ ಬೆಂಬಲ ನೀಡುವ ಹಾಗೂ ಉದ್ಯಮಶೀಲತೆಯನ್ನು ಉದ್ದೀಪಿಸುವ ಕೆಲಸ ಶಿಕ್ಷಕರಿಂದ ಆಗುತ್ತದೆ" ಎಂದು ಇಂಡೂಸ್ ಟ್ರಸ್ಟ್ ಸಿಇಒ ಲೆಫ್ಟಿನೆಂಟ್ ಜನರಲ್ ಅರ್ಜುನ್ ರೇ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News