ಬಿಜೆಪಿ ಸರಕಾರದಲ್ಲೂ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ: ಜೆಡಿಎಸ್ ಆರೋಪ

Update: 2019-08-28 11:51 GMT
ರಮೇಶ್ ಬಾಬು

ಬೆಂಗಳೂರು, ಆ. 28: ಬಿಜೆಪಿ ಸರಕಾರದ ಅವಧಿಯಲ್ಲೂ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ಗುಪ್ತಚರ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಹಾಗೂ ಜೆಡಿಎಸ್ ಮುಖಂಡರ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಕೆಲ ದಿನಗಳ ಹಿಂದೆ ನನಗೂ ಅನಾಮಿಕರೊಬ್ಬರು ಪತ್ರಕರ್ತರ ಹೆಸರಿನಲ್ಲಿ ಕರೆ ಮಾಡಿದ್ದರು ಎಂದು ದೂರಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ದೇವೇಗೌಡರ ಅಭಿಪ್ರಾಯ ಏನು ಅಂತ ಒತ್ತಾಯ ಮಾಡಿ ಕೇಳಿದರು. ಅದನ್ನು ಅವರ ಬಳಿಯೇ ಕೇಳಿ ಅಂತ ಹೇಳಿದ್ದೆ. ಅನುಮಾನ ಬಂದು ಕರೆ ಬಂದ ಸಂಖ್ಯೆ ಪರಿಶೀಲಿಸಿದಾಗ ಅದು ಗುಪ್ತಚರ ಇಲಾಖೆಯವರದ್ದು ಎಂದು ಗೊತ್ತಾಯಿತು.

ಪತ್ರಕರ್ತರ ಹೆಸರಿನಲ್ಲಿ ಇವರು ಯಾಕೆ ಕರೆ ಮಾಡಬೇಕು? ವಿಪಕ್ಷದವರನ್ನು ಮಣಿಸಲು ಗುಪ್ತಚರ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆಗೆ ಆಗ್ರಹಿಸುವೆ ಎಂದು ಹೇಳಿದರು.

ಸಿಬಿಐ ಮೇಲೆ ಆರೋಪ: ಫೋನ್ ಕದ್ದಾಲಿಕೆ ತನಿಖೆಯನ್ನು ಸಿಬಿಐಗೆ ವಹಿಸಿದ್ದೇ ತಪ್ಪು. ಹಲವು ಪ್ರಕರಣಗಳಲ್ಲಿ ಸಿಬಿಐ ಪ್ರತಿವಾದಿಯಾಗಿದೆ. ಹೀಗಿರುವಾಗ ತನಿಖೆ ಸಿಬಿಐಗೆ ವಹಿಸಲು ಹೇಗೆ ಸಾಧ್ಯ? ಸಿಬಿಐಗೆ ವಹಿಸುವ ಬಗ್ಗೆ ಮಾನದಂಡ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ನಿರ್ದೇಶನ ನೀಡಿದೆ ಎಂದು ಉಲ್ಲೇಖಿಸಿದರು.

ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆಯವರ ಫೋನ್ ಈ ಹಿಂದೆ ಕದ್ದಾಲಿಕೆಯಾಗಿತ್ತು. ಆಗ ಯಡಿಯೂರಪ್ಪ ವಿರುದ್ದವೇ ಆರೋಪ ಮಾಡಿದ್ದರು. ಹೀಗಾಗಿ ಈಗಿನ ಪ್ರಕರಣ ಸಿಬಿಐಗೆ ವಹಿಸುವುದು ಬೇಡ ಎಂದು ಬಿಎಸ್‌ವೈ ಅವರಿಗೆ ಪತ್ರ ಬರೆಯುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News