ನೆರೆ ಸಂತ್ರಸ್ತರಿಗೆ ಕೊಟ್ಟ ಮಾತನ್ನು ಬಿಎಸ್‌ವೈ ಉಳಿಸಿಕೊಳ್ಳಲಿ: ಡಿ.ಕೆ.ಶಿವಕುಮಾರ್

Update: 2019-08-28 11:55 GMT

ಬೆಂಗಳೂರು, ಆ. 28: ನೆರೆಯಿಂದ ಬೀದಿಗೆ ಬಿದ್ದಿರುವ ಸಂತ್ರಸ್ತರಿಗೆ ನೆರವಾಗಲು ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಅವರು ಈಗಾಗಲೇ ಹೇಳಿರುವಂತೆ ಮನೆ ಬಾಡಿಗೆಗೆ 5 ಸಾವಿರ ರೂ., ಮನೆ ನಿರ್ಮಿಸಲು 5 ಲಕ್ಷ ರೂ.ಗಳನ್ನು ನೀಡಿ, ಆ ಜನರ ನೋವಿಗೆ ಸ್ಪಂದಿಸಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಬುಧವಾರ ಇಲ್ಲಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ನೆರೆ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ನಾವು ನಮ್ಮ ಹೋರಾಟ ಮಾಡುತ್ತೇವೆ. ನಾನು ಶಿವಳ್ಳಿ ಕ್ಷೇತ್ರ ಕುಂದಗೋಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಪ್ರವಾಹ ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ನೀಡುವ ಕಾರ್ಯ ಆಗಿತ್ತು. ಆದರೆ ಬೆಳಗಾವಿಗೆ ಹೋದರೆ 1 ರೂ.ಗಳನ್ನು ಇವತ್ತಿಗೂ ಕೊಟ್ಟಿಲ್ಲ. ಕುಮಾರಸ್ವಾಮಿ ಅವರು ಬಹುಮತ ಸಾಬೀತು ಪಡಿಸುವ ಮುನ್ನವೇ ರೈತರ ಸಾಲಮನ್ನಾ ಅಂತಾ ತರಾತುರಿ ಮಾಡಿದ್ದರಲ್ಲ ಯಡಿಯೂರಪ್ಪನವರು, ಸಾಲಮನ್ನಾ ಆಮೇಲೆ ಇರಲಿ, ಸದ್ಯಕ್ಕೆ ಬೀದಿಗೆ ಬಿದ್ದಿರುವ ಪ್ರವಾಹ ಸಂತ್ರಸ್ತರಿಗೆ ತಾವು ಕೊಟ್ಟ ಮಾತಿನಂತೆ ಪರಿಹಾರ ನೀಡಲಿ ಎಂದು ಕೋರಿದರು.

ಹಣೆಯಲ್ಲಿ ಬರೆದಿದ್ದರೆ ಸಿಗುತ್ತೆ: ಹಣೆ ಬರಹದಲ್ಲಿ ಬರೆದಿದ್ದರೆ ಎಲ್ಲವೂ ಹುಡುಕಿಕೊಂಡು ಬರುತ್ತವೆ. ಅದರ ಮೇಲೆ ನನಗೆ ನಂಬಿಕೆ ಇದೆ. ಈಗ ಸವದಿ ಅವರನ್ನೇ ನೋಡಿ, ನಾನು ಅವರಿಗೆ ಅಭಿನಂದಿಸುತ್ತೇನೆ. ಚುನಾವಣೆ ಗೆಲ್ಲದಿದ್ದರೂ ಅವರ ಹಣೆಯಲ್ಲಿ ಬರೆದಿತ್ತು ಸಚಿವರೂ ಆದರೂ, ಡಿಸಿಎಂ ಕೂಡ ಆಗಿದ್ದಾರೆ. ಹಾಗೆಯೆ ನಮ್ಮ ಹಣೆಯಲ್ಲಿ ಬರೆದಿದ್ದರೆ ನಾವು ಉನ್ನತ ಹುದ್ದೆ ಅಲಂಕರಿಸುತ್ತೇವೆ ಎಂದರು.

ನಿಲ್ಲಿಸಲು ಬಿಡಲ್ಲ: ನಮ್ಮ ಸರಕಾರದ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಬಿಡುವುದಿಲ್ಲ. ಕುಮಾರಸ್ವಾಮಿ ಸರಕಾರ ಇರಲಿ ಅಥವಾ ಸಿದ್ದರಾಮಯ್ಯರ ಸರಕಾರ ಇರಲಿ. ನಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಲು ಹೋದರೆ, ಕೇವಲ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್‌ನ 34 ಶಾಸಕರೂ ಸೇರಿ ಹೋರಾಟ ಮಾಡುತ್ತೇನೆ. ನಮ್ಮ ಮೈತ್ರಿ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದರು.

ನಾನು ಕಾಯ್ತಿದ್ದೀನಿ: ಬಾಂಬೆ ಸ್ನೇಹಿತರು ಯಾವಾಗ ಮಂತ್ರಿ ಆಗುತ್ತಾರೆ ಎಂದು ಕಾಯುತ್ತಿದ್ದೇನೆ. 17 ಖಾತೆಗಳು ಅವರಿಗಾಗಿ ಕಾಯ್ದುಕೊಂಡಿವೆ. ಹೀಗಾಗಿ ಅವರು ಮಂತ್ರಿಯಾಗುವುದನ್ನು ಟಿವಿಯಲ್ಲಿ ನೋಡಲು ಕಾಯುತ್ತಿದ್ದೇನೆ. ಅವರು ಯಾಕೆ ಕಣ್ಣೀರಿಡಬೇಕು? ಪಾಪ ಅವರೂ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಪಕ್ಷದಿಂದ ಗೆದ್ದಿದ್ದಾರೆ.

ಅವರು ಅದನ್ನು ಎತ್ತಿಕೊಂಡು ಹೋಗಿ ಬಿಜೆಪಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಹೋರಾಟ ಮಾಡಿ ಬಿಎಸ್‌ವೈಗೆ ಕಂಕಣ ಕಟ್ಟಿ ಸಿಎಂ ಮಾಡಿದ್ದಾರೆ. ಹೀಗಾಗಿ ಅದರ ಫಲ ನುಭವಿಸುತ್ತಿದ್ದಾರೆ. ಮೊದಲು ಒಂದು ಕಾಲ ಇತ್ತು. ಅಲ್ಲಿ ತಂದೆ-ತಾಯಿ ಮಾಡಿದ ಫಲವನ್ನು ಮಕ್ಕಳು ಮೊಮ್ಮಕ್ಕಳು ಅನುಭವಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ನಾವು ಮಾಡಿದನ್ನು ನಾವೇ ಅನುಭವಿಸಬೇಕೆಂದು ಅನರ್ಹ ಶಾಸಕರನ್ನು ಟೀಕಿಸಿದರು.

ನಾನೇಕೆ ಲಾಬಿ ಮಾಡಲಿ ?

ನಾನು ಯಾವ ಸ್ಥಾನಕ್ಕೂ ಆಕಾಂಕ್ಷಿ ಅಲ್ಲ. ನೀವು ಹೇಳುವಂತೆ ನಾನು ಎಲ್ಲಿಗೂ ಲಾಬಿ ಮಾಡಲು ಹೋಗಿಲ್ಲ. ಅದೆಲ್ಲ ಕಾಡಿಬೇಡಿ ಪಡೆಯುವಂತದ್ದೂ ಅಲ್ಲ. ನಾನೇಕೆ ಲಾಬಿ ಮಾಡಲಿ? ನನಗೆ ಲಾಬಿ ಮಾಡುವ, ಬಯೋಡೆಟಾ ಕೊಡುವ ಅಗತ್ಯವಿಲ್ಲ. ನನ್ನ ಪಕ್ಷ ಹಾಗೂ ಗಾಂಧಿ ಕುಟುಂಬದ ಮೇಲೆ ನನಗೆ ನಂಬಿಕೆ ಇದೆ. ಅವರ ನಾಯಕತ್ವದ ಮೇಲೆ ನಂಬಿಕೆ ಇದೆ. ಅವರು ಏನೇ ಕೊಟ್ಟರು ಅದನ್ನು ಪ್ರಸಾದ ಅಂತಾ ಸ್ವೀಕರಿಸುತ್ತೇವೆ.

-ಡಿ.ಕೆ.ಶಿವಕುಮಾರ್, ಮಾಜಿ ಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News