ಯುವ ಪೀಳಿಗೆಗೆ ಕಾನೂನು ಶಿಕ್ಷಣ ಅಗತ್ಯ: ನಿವೃತ್ತ ನ್ಯಾ.ನಾಗಮೋಹನ್‌ ದಾಸ್

Update: 2019-08-28 11:59 GMT

ಬೆಂಗಳೂರು, ಆ.28: ಇಂದಿನ ಯುವಪೀಳಿಗೆಗೆ ಕಾನೂನು ಶಿಕ್ಷಣದ ಅವಶ್ಯಕತೆ ಹೆಚ್ಚು ಅಗತ್ಯವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗವೋಹನ್‌ದಾಸ್ ಹೇಳಿದ್ದಾರೆ.

ಬುಧವಾರ ನಗರದ ಸಂತ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಎಂ.ಜಿ.ಹೆಗ್ಡೆ ಅವರು ಅನುವಾದಿಸಿರುವ ರೀಡಿಂಗ್ ದಿ ಕಾನ್ಸ್‌ಟಿಟ್ಯೂಷನ್ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಯುವ ಸಮುದಾಯಕ್ಕೆ ನೈತಿಕ ಹಾಗೂ ಕಾನೂನು ಶಿಕ್ಷಣದ ಅತ್ಯಗತ್ಯವಾಗಿದೆ. ಕಾನೂನು ಶಿಕ್ಷಣವಿಲ್ಲದಿದ್ದರೆ ಶಿಕ್ಷಿತರು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಸಂವಿಧಾನವು ದೇಶದ ಅತ್ಯಂತ ದೊಡ್ಡ ಕಾನೂನಿನ ಪುಸ್ತಕವಾಗಿದ್ದು, ಕಾನೂನುಗಳು ಇಲ್ಲದೇ ಇದ್ದರೆ ಪ್ರಜೆಗಳು ನೆಮ್ಮದಿಯಿಂದ ಬದುಕಲು ಸಾದ್ಯವಾಗುವುದಿಲ್ಲ ಎಂದರು.

ಪ್ರಪಂಚದ 198 ದೇಶಗಳ ಪೈಕಿ 190 ರಾಷ್ಟ್ರಗಳು ಸಂವಿಧಾನವನ್ನು ಹೊಂದಿದ್ದು, ಅವುಗಳಲ್ಲಿ ಭಾರತದ ಸಂವಿಧಾನ ಶ್ರೇಷ್ಠವಾದುದಾಗಿದೆ. ಆದರೆ, ಇಂದು ದೇಶದಲ್ಲಿನ ಜನಸಂಖ್ಯೆಯಲ್ಲಿ ಶೇ.95 ರಷ್ಟು ಜನರು ಸಂವಿಧಾನದ ಅರಿವಿಲ್ಲದೆ ಬದುಕುತ್ತಿದ್ದಾರೆ. ನಮ್ಮ ಸಂವಿಧಾನದಲ್ಲಿ ಯಾವುದೇ ತಪ್ಪುಗಳಿಲ್ಲ. ಆದರೆ, ಅದನ್ನು ಓದದೇ ಅರ್ಥೈಸಿಕೊಳ್ಳದೇ ಅನುಷ್ಠಾನಗೊಳಿಸಲು ಮುಂದಾಗಿರುವವರ ದೃಷ್ಟಿಕೋನದಲ್ಲಿ ದೋಷವಿದೆ ಎಂದು ಅವರು ವಿಶ್ಲೇಷಿಸಿದರು.

ನಮ್ಮ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಅದರಂತೆ ನಡೆದುಕೊಂಡರೆ ಕೆಲವೇ ವರ್ಷಗಳಲ್ಲಿ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳ ಬಹುದಾಗಿದೆ. ಹಾಗಾಗಿ, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬ ಪ್ರಜೆಗಳು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಸಂವಿಧಾನವನ್ನು 1949ರ ನವೆಂಬರ್ 26 ರಂದು ಅಂಗೀಕರಿಸಲಾಗಿದ್ದು, ಈ ದಿನವನ್ನು ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿದೆ. ನಿತ್ಯದ ಪ್ರತಿಯೊಂದು ಹಂತದಲ್ಲಿ ಕಾನೂನು ಅತ್ಯವಶ್ಯಕವಾಗಿದ್ದು, ಇಂದಿನ ದಿನ ಮಹತ್ವದ್ದಾಗಿದೆ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಕಾನೂನಿಗೆ ಧಕ್ಕೆ ಬಾರದಂತೆ ಜೀವನ ನಡೆಸಬೇಕು. ಸಂವಿಧಾನವನ್ನು ಗೌರವಿಸುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಹೇಳಿದರು.

ದೇಶದ ಪ್ರಜೆಗಳು ಮುಕ್ತವಾಗಿ ಜೀವಿಸುವ ವಾತಾವರಣ ಸೃಷ್ಟಿಸಿದ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ಇಂತಹ ಅವಕಾಶವನ್ನು ಜನತೆಗೆ ಕಲ್ಪಿಸಿದ ಸಂವಿಧಾನಕ್ಕೆ ಗೌರವ ನೀಡುವುದು ಅಗತ್ಯವಾಗಿದೆ. ಈ ದೇಶದ ಎಲ್ಲ ಪ್ರಜೆಗಳು ದೇಶದ ಅಭಿವೃದ್ದಿ ಆದ್ಯತೆ ನೀಡಬೇಕು. ಅಂದಾಗಲೇ ದೇಶದ ಏಳ್ಗೆಯಾಗಲು ಸಾಧ್ಯ ಎಂದು ಹೇಳಿದರು.

ವಾಣಿಜ್ಯ ಸಂಸ್ಥೆಯ ಪ್ರಾಂಶುಪಾಲ ಡಾ.ಡೇನಿಯಲ್ ಫರ್ನಾಂಡೀಸ್ ಮಾತನಾಡಿ, ನಮ್ಮ ದೇಶದ ಸಂವಿಧಾನ ವಿಶ್ವಮಾನ್ಯತೆ ಪಡೆದಿದ್ದು, ಸಮಾನತೆ, ಸೋದರತ್ವ, ಸಹಬಾಳ್ವೆಯಂತಹ ಅಂಶಗಳನ್ನು ಪ್ರತಿಪಾದಿಸಿದೆ ಎಂದು ಹೇಳಿದರು.

ಸಂವಿಧಾನವನ್ನು ಎಲ್ಲರೂ ಓದಬೇಕು ಹಾಗೂ ಅದನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಅಸಹನೆ ಸರಳವಾಗಿ ಸ್ಪೋಟಗೊಳ್ಳುವ ಸಾಧ್ಯತೆಯಿದೆ. ಯುವಜನರಿಗೆ ಸರಳ ಹಾಗೂ ಸ್ಪಷ್ಟವಾದ ಮಾಹಿತಿ ನೀಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಹೋರಾಟಗಾರ್ತಿ ಕೆ.ಎಸ್.ವಿಮಲಾ, ಸಂಸ್ಥೆಯ ನಿರ್ದೇಶಕ ಡಾ.ಜೋಸೆಫ್ ಕ್ಸೇವಿಯರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭಾರತೀಯರಿಗೆ ಸಂವಿಧಾನವೇ ಎಲ್ಲ

ಭಾರತದ ಸಂವಿಧಾನ ಶ್ರೇಷ್ಠ ಹಾಗೂ ಸಾರ್ವಕಾಲಿಕವಾಗಿರುವ ಪ್ರಸ್ತುತತೆ ಹೊಂದಿರುವ ಗ್ರಂಥವಾಗಿದೆ. ಭಾರತೀಯರಿಗೆ ಧರ್ಮ ಗ್ರಂಥವೂ, ಮಹಾ ಗ್ರಂಥವೂ ಸಂವಿಧಾನವೇ ಆಗಿದೆ ಎಂದ ಅವರು, ಇದು ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ಒಳಗೊಂಡಿದೆ. ಶಾಂತಿ ಸಂದೇಶ, ಸಮಾನತೆಯ ಪರಿಕಲ್ಪನೆಯಡಿ ಸಂವಿಧಾನ ರಚನೆಯಾಗಿದೆ.

-ಎಚ್.ಎನ್.ನಾಗವೋಹನ್‌ದಾಸ್, ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News