ಆಶಾ ಕಾರ್ಯಕರ್ತೆ ಕೊಲೆ: ಆರೋಪಿ ಪತಿ ಬಂಧನ

Update: 2019-08-28 12:42 GMT

ಬೆಂಗಳೂರು, ಆ.28: ಮದ್ಯದ ಅಮಲಿನಲ್ಲಿ ಜಗಳವಾಡಿ ಮಹಿಳೆಯನ್ನು ಕೊಲೆಗೈದಿರುವ ಘಟನೆ ರಾಜಗೋಪಾಲನಗರದ ಬಸಪ್ಪನಕಟ್ಟೆಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಸಪ್ಪನಕಟ್ಟೆಯ ಸರಸ್ವತಿ(36) ಮೃತಪಟ್ಟಿದ್ದು, ಕೊಲೆಗೈದ ಆರೋಪದಡಿ ಪತಿ ಮಲ್ಲಿಕಾರ್ಜುನ(40)ನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನನ್ನು 15 ವರ್ಷಗಳ ಹಿಂದೆ ವಿವಾಹವಾಗಿದ್ದ ಸರಸ್ವತಿಗೆ 13 ವರ್ಷದ ಹೆಣ್ಣು ಹಾಗೂ 9 ವರ್ಷದ ಗಂಡು ಸೇರಿ ಇಬ್ಬರು ಮಕ್ಕಳಿದ್ದಾರೆ. ಕಳೆದೊಂದು ವರ್ಷದಿಂದ ಮದ್ಯದ ಸೇವನೆ ಚಟ ಅಂಟಿಸಿಕೊಂಡಿದ್ದ ಮಲ್ಲಿಕಾರ್ಜುನ, ಇತ್ತೀಚಿಗೆ ಸರಿಯಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲಿ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಗಂಡನ ವರ್ತನೆಯಿಂದ ಬೇಸತ್ತ ಸರಸ್ವತಿ ಕುಟುಂಬ ನಿಭಾಯಿಸಲು ಆಶಾ ಕಾರ್ಯಕರ್ತೆಯಾಗಿ ಕೆಲಸಕ್ಕೆ ಹೋಗುತ್ತಿದ್ದರು. ಕುಡಿತ ಬಿಡುವಂತೆ ಪತಿಗೆ ಹಲವು ಬಾರಿ ಬುದ್ಧಿ ಹೇಳಿದರೂ ಆತನ ವರ್ತನೆ ಸರಿಯಾಗಿರಲಿಲ್ಲ. ಹಣಕ್ಕಾಗಿ ಪತ್ನಿಯ ಮೇಲೆ ದೌರ್ಜನ್ಯವೆಸಗುತ್ತಿದ್ದ ಎನ್ನಲಾಗಿದೆ.

ಮಂಗಳವಾರ ರಾತ್ರಿ ದಂಪತಿ ನಡುವೆ ಜಗಳ ಉಂಟಾಗಿ, ಆರೋಪಿ, ಪತಿಯನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ರಾಜಗೋಪಾಲನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News