ಶತದಡ್ಡನ ಪ್ರಶ್ನೆಗೆ ನಾನು ಉತ್ತರ ನೀಡಬೇಕೇ?: ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ

Update: 2019-08-29 12:30 GMT

ಬೆಂಗಳೂರು, ಆ. 29: ‘ನನ್ನನ್ನು ದಡ್ಡ ಎನ್ನುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನೇ ಶತದಡ್ಡ. ಇಂತಹ ಶತದಡ್ಡನ ಪ್ರಶ್ನೆಗೆ ನಾನು ಉತ್ತರ ನೀಡಬೇಕೇ?’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಕಮಲ ಮಾಡಿದ್ದಾರೆಂದು ಕಾಂಗ್ರೆಸ್ ಮುಖಂಡರು ಗೂಬೆ ಕೂರಿಸುತ್ತಿದ್ದಾರೆ. ಆದರೆ, ‘ಆಪರೇಷನ್’ ಜನಕ ಸಿದ್ದರಾಮಯ್ಯನೇ ಎಂದು ಏಕವಚನದಲ್ಲೆ ಟೀಕಿಸಿದರು.

ಸಿದ್ದರಾಮಯ್ಯಗೆ ಕಾಂಗ್ರೆಸ್ ಅಧಿಕಾರದ ಆಸೆ ತೋರಿಸಿಲ್ಲವೇ? ಇಲ್ಲದೆ ಇದ್ದರೆ ಅವರು ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಹೋದದ್ದು ಏಕೆ ಎಂದು ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಆಗ್ರಹಿಸಿದ ಈಶ್ವರಪ್ಪ, ಜೆಡಿಎಸ್‌ಗೆ ದ್ರೋಹ ಮಾಡಿದ್ದರಿಂದ ಅವರನ್ನು ಹೊರಹಾಕಿದರು ಎಂದು ಲೇವಡಿ ಮಾಡಿದರು.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ 40 ಸಾವಿರ ಮತಗಳ ಭಾರೀ ಅಂತರದಿಂದ ಸೋತಿದ್ದು, ನಾನು ಅಷ್ಟೇ ಮತದ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಆದರೆ, ಬಾದಾಮಿಯಲ್ಲಿ ಸಿದ್ದರಾಮಯ್ಯ ಎಷ್ಟು ಮತಗಳಿಂದ ಗೆದ್ದಿದ್ದಾರೆ. ಸಿದ್ದರಾಮಯ್ಯರ ಸೋಲಿಗೆ ಅವರ ಭಾಷೆಯೆ ಕಾರಣ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಪ್ರಧಾನಿ ಬರ್ತಾರೆ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮಳೆ ಇಲ್ಲದೆ ಬರ ಪರಿಸ್ಥಿತಿ ಇತ್ತು. ಮೈತ್ರಿ ಸರಕಾರದ ಆಡಳಿತದಲ್ಲಿ ಜನತೆ ಕಷ್ಟಕ್ಕೆ ಸ್ಪಂದಿಸಲಿಲ್ಲ. ಸಚಿವರು ಸೇರಿ ಯಾರೂ ರಾಜ್ಯ ಪ್ರವಾಸವನ್ನೆ ನಡೆಸಲಿಲ್ಲ. ಇದೀಗ ಬಿಜೆಪಿ ಸರಕಾರ ಜನರಿಗೆ ಸ್ಪಂದಿಸುತ್ತಿದೆ. ಆದರೆ, ಸಿದ್ದರಾಮಯ್ಯ ಟೀಕೆಗಾಗಿ ಹೇಳಿಕೆ ನೀಡುತ್ತಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಸಿಎಂ ಸಹಿತ ಎಲ್ಲ ಸಚಿವರು ಪ್ರವಾಸ ನಡೆಸಿ ಪರಿಸ್ಥಿತಿ ಅಧ್ಯಯನ ನಡೆಸಿದ್ದಾರೆ. ಕೇಂದ್ರದ ಇಬ್ಬರು ಸಚಿವರು ಪರಿಶೀಲನೆ ನಡೆಸಿದ್ದು, ಕೇಂದ್ರ ತಂಡವೂ ರಾಜ್ಯಕ್ಕೆ ಆಗಮಿಸಿದೆ. ಸೆ.6, 7ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ನೆರೆ ಪರಿಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಂದಿಸಲಿವೆ ಎಂದರು.

ಯಾವುದೇ ಸಂದರ್ಭದಲ್ಲಿಯೂ ಬಿಜೆಪಿ ಟೆಲಿಫೋನ್ ಕದ್ದಾಲಿಕೆ ಮಾಡುವುದಿಲ್ಲ. ರಾಜ್ಯದಲ್ಲಿ ಅಂತಹ ಯಾವುದೇ ಪ್ರಯತ್ನವೂ ನಡೆದಿಲ್ಲ. ಈ ಪ್ರಕರಣದಲ್ಲಿ ತಪ್ಪು ಮಾಡಿರುವ ಯಾರೇ ಆದರೂ ಕಠಿಣ ಶಿಕ್ಷೆ ಆಗಬೇಕು. ಹೀಗಾಗಿಯೇ ಆ ಪ್ರಕರಣ ಸಿಬಿಐಗೆ ಒಪ್ಪಿಸಲಾಗಿದೆ

-ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News