ಅತಿವೃಷ್ಟಿ-ಅನಾವೃಷ್ಟಿ ನಿಭಾಯಿಸುವಲ್ಲಿ ವಿಫಲ ಆರೋಪ: ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2019-08-29 16:27 GMT

ಬೆಂಗಳೂರು, ಆ.29: ರಾಜ್ಯದಲ್ಲಿ ಇತ್ತೀಚಿಗೆ ಉಂಟಾದ ನೆರೆ ಹಾಗೂ ಅತಿವೃಷ್ಟಿಯನ್ನು ನಿಭಾಯಿಸಲು ಮತ್ತು ಪರಿಣಾಮಕಾರಿಯಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.

ಗುರುವಾರ ನಗರದ ಮೌರ್ಯ ವೃತ್ತದ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ನಾಯಕರ ನೇತೃತ್ವದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದ ಜನ ಬಿಜೆಪಿಗೆ ಮತ ಹಾಕಿ 25 ಮಂದಿ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಆದರೆ, ರಾಜ್ಯದಲ್ಲಿ ಹಿಂದೆ ಕಂಡರಿಯದಷ್ಟು ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ನೆರೆ ಮತ್ತು ಬರ ಪರಿಸ್ಥಿತಿ ಎದುರಿಸಲು ಹಣ ನೀಡಿಲ್ಲ. ಈ ಮೂಲಕ ರಾಜ್ಯದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದರು.

ರಾಜ್ಯದಲ್ಲಿ ನೆರೆಯಿಂದಾಗಿ 22 ಜಿಲ್ಲೆಗಳಲ್ಲಿ ಜನರು ಸಂತ್ರಸ್ತರಾಗಿದ್ದಾರೆ. ಇದೇ ವೇಳೆ 7 ಜಿಲ್ಲೆಗಳಲ್ಲಿ ಶೇ.40 ಕ್ಕಿಂತ ಕಡಿಮೆ ಮಳೆಯಾಗಿದ್ದು, ಬರ ಆವರಿಸಿದೆ. ಹೀಗಿದ್ದರೂ, ಸರಕಾರಗಳು ಮೌನ ವಹಿಸಿವೆ. ಹಿಂದೆಂದೂ ಇಲ್ಲದಷ್ಟು ರಾಜ್ಯದ ಜನರು ಬಿಜೆಪಿಯನ್ನು ನಂಬಿದ್ದರು. ಇದೀಗ ಆ ಜನರ ನಂಬಿಕೆಗೆ ಪ್ರಧಾನಿ ಮೋದಿ ಮೋಸ ಮಾಡಿದ್ದಾರೆ ಎಂದು ದೂರಿದರು.

ಪ್ರಧಾನಿ ಮೋದಿಗೆ ಜನರ ಸಂಕಷ್ಟ, ನೆರೆ, ಬರದಂತಹ ವಿಷಯಗಳು ಆದ್ಯತೆಯಾಗಿಲ್ಲ. ಈ ಸಂದರ್ಭದಲ್ಲಿಯೂ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದ ಅವರು, ಮೋದಿ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‌ರನ್ನು ನೋಡಿ ಕಲಿಯಬೇಕು. 2009 ರಲ್ಲಿ ಬರ ಬಂದಾಗ ರಾಜ್ಯಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ಪರಿಹಾರ ಘೋಷಿಸಿದ್ದರು ಎಂದು ನುಡಿದರು.

ಇಂದಿನ ಬಿಜೆಪಿ ಸರಕಾರದಲ್ಲಿ ಗೃಹ ಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಸಮೀಕ್ಷೆ ನಡೆಸಿದ್ದಾರೆ. ಆದರೆ, ಇದುವರೆಗೂ ನಯಾಪೈಸೆ ನೀಡಿಲ್ಲ. ಹಿಂದಿನ ಸರಕಾರ ಸಲ್ಲಿಸಿದ್ದ ಮನವಿ ಆಧರಿಸಿ ಮುಂಗಾರು ನಷ್ಟದ ಬಾಬ್ತು ನೀಡಿದೆ. ಅದು ನೆರೆ ಪರಿಹಾರ ಹಣವಲ್ಲ. ಆದರೆ, ಸಚಿವ ಈಶ್ವರಪ್ಪ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ನೆರೆಯಿಂದಾಗಿ 20 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ನೂರಾರು ಕುಟುಂಬಗಳು ಬೀದಿಪಾಲಾಗಿದೆ. ಹೀಗಾಗಿ, ಇದನ್ನು ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಐದು ಸಾವಿರ ಕೋಟಿ ರೂ.ಗಳನ್ನು ಮಧ್ಯಂತರ ಪರಿಹಾರವಾಗಿ ನೀಡಬೇಕು. ಇಲ್ಲದಿದ್ದರೆ, ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನೆರೆಯಿಂದಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಜನಜೀವನ ದುಸ್ತರವಾಗಿದೆ. ಆದರೆ, ಸಿಎಂ ಯಡಿಯೂರಪ್ಪ ದಿಲ್ಲಿಗೆ ಹೋದರೂ ಅತಿವೃಷ್ಟಿ ಪರಿಹಾರಕ್ಕಾಗಿ ಹೆಚ್ಚಿನ ಅನುದಾನ ಪಡೆಯುವಲ್ಲಿ ಸೋತಿದ್ದಾರೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳೇ ಆಡಳಿತದಲ್ಲಿವೆ. ಹಾಗಾಗಿ ಯಾವುದೇ ಮಲತಾಯಿ ಧೋರಣೆ ತೋರದೆ ಕೇಂದ್ರ ಹೆಚ್ಚಿನ ಅನುದಾನವನ್ನು ನೀಡಬೇಕಿತ್ತು. ಆದರೆ, ಇದು ಯಾವುದು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಟ್ವಿಟರ್ ಪಿಎಂ: ಪ್ರಧಾನಿ ನರೇಂದ್ರ ಮೋದಿ ಸದಾ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ, ಒಮ್ಮೆಯೂ ಕರ್ನಾಟಕ ಪರಿಸ್ಥಿತಿ ಕುರಿತು ಹೇಳಿಲ್ಲ. ಇಲ್ಲಿನ ಬಿಜೆಪಿ ಸಂಸದರು ಇದ್ದರು ಯಾವುದೇ ಪ್ರಯೋಜನವೇ ಆಗಿಲ್ಲ ಎಂದು ಗುಂಡೂರಾವ್ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ನೆರೆ ಪರಿಸ್ಥಿತಿ ವಿಪರೀತವಾಗಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಲಕ್ಷಾಂತರ ಜಾನುವಾರುಗಳು ಸಾವನ್ನಪ್ಪಿವೆ. ಹಲವು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರಕಾರ ಸಂತ್ರಸ್ತರ ಜೊತೆಗೆ ಇರಬೇಕು ಎಂದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ, ಬಿ.ಝಡ್.ಝಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ ಸೇರಿದಂತೆ ಹಲವರಿದ್ದರು.

ರಾಜ್ಯಪಾಲರ ಭೇಟಿ

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಬಳಿ ಸರ್ವಪಕ್ಷ ನಿಯೋಗ ಒಯ್ಯಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಸಿಎಂಗೆ ನಿರ್ದೇಶನ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News