ಭಾರತದ ಅರ್ಥವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದ ಅಮಿತ್ ಶಾ

Update: 2019-08-30 08:38 GMT

ಹೊಸದಿಲ್ಲಿ, ಆ.30: ಭಾರತದ ಒಟ್ಟಾರೆ ಆರ್ಥಿಕತೆಯ ಮುಖ್ಯ ಸ್ಥಂಭಗಳು ಸಾಕಷ್ಟು ಸಶಕ್ತವಾಗಿರುವುದರಿಂದ ದೇಶದ ಅರ್ಥವ್ಯವಸ್ಥೆ ಸದ್ಯ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೊಂಡಿದ್ದಾರೆ. ಆರ್ಥಿಕ ಕುಸಿತದ ಭಯದ ನಡುವೆ ಗೃಹ ಸಚಿವರ ಈ ಹೇಳಿಕೆ ಬಂದಿದೆ.

“2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಮೊದಲು ಬಂದಾಗ ದೇಶದ ಅರ್ಥವ್ಯವಸ್ಥೆ  ದುಸ್ಥಿತಿಯಲ್ಲಿತ್ತು'' ಎಂದು ಗುಜರಾತ್ ನ ಗಾಂಧಿನಗರದ ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಶಾ ಹೇಳಿದರು.

“ಆದರೆ ಇಂದು 2019ರಲ್ಲಿ  ಭಾರತ ಶೇ.7ರಷ್ಟು ಪ್ರಗತಿ ಪ್ರಮಾಣದೊಂದಿಗೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ'' ಎಂದು ಶಾ ಹೇಳಿಕೊಂಡರು.

ಕಳೆದ ಐದು ವರ್ಷಗಳಲ್ಲಿ ಸರಕಾರ ಹಣದುಬ್ಬರ ಪ್ರಮಾಣವನ್ನು ಶೇ.3ಕ್ಕಿಂತಲೂ ಕಡಿಮೆಯಿರುವಂತೆ  ನೋಡಿಕೊಳ್ಳಲು ಸಮರ್ಥವಾಗಿದ್ದು, ವಿತ್ತೀಯ ಕೊರತೆ ಶೇ. 5ರಿಂದ ಶೇ. 3.5ಗೆ ಇಳಿದಿದೆ ಎಂದು ಅವರು ಹೇಳಿದರು. ಆರ್ಥಿಕತೆಯ ಕುರಿತಂತೆ ಭಾರತ ಮೂರನೇ ಅತ್ಯಂತ ಮುಂದುವರಿದ ರಾಷ್ಟ್ರವಾಗಬೇಕೆಂದು ಪ್ರಧಾನಿ ಮೋದಿ ಹೇಳಿರುವುದುರಿಂದ ಸರಕಾರ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ,'' ಎಂದು ಶಾ ಹೇಳಿದರು.

``ಇಂಧನ ಹಾಗೂ ಪೆಟ್ರೋಲಿಯಂ ಕ್ಷೇತ್ರದ ಕೊಡುಗೆಯಿಲ್ಲದೆ ಮುಂದಿನ ಐದು ವರ್ಷಗಳಲ್ಲಿ $5 ಟ್ರಿಲಿಯನ್ ಆರ್ಥಿಕತೆಯಾಗುವ ಭಾರತದ ಗುರಿ ತಲುಪಸಲು ಸಾಧ್ಯವಿಲ್ಲ'' ಎಂದೂ ಶಾ ವಿವರಿಸಿದರು.

ಕಾಶ್ಮೀರದ ವಿಚಾರ ಪ್ರತಿಕ್ರಿಯಿಸಿದ ಅವರು, “ಪ್ರಧಾನಿ ಕೇವಲ ಜನರನ್ನು ಸಂಪ್ರೀತಗೊಳಿಸಲು ನಿರ್ಧಾರ ಕೈಗೊಳ್ಳುವುದಿಲ್ಲ. ಬದಲಾಗಿ ಜನರಿಗೆ ಯಾವುದು ಒಳ್ಳೆಯದೋ ಅಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇಂತಹ  ಒಂದು ತೀರ್ಮಾನಕ್ಕೆ ರಾಜಕೀಯ ಬೆಲೆ ತೆರಲು ಮೋದಿಗೆ  ಧೈರ್ಯವಿದೆ ಹಾಗೂ ಈ ಮೂಲಕ ಜನರ ವಿಶ್ವಾಸ ಸಂಪಾದಿಸಿದ್ದಾರೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News