ಸಾರ್ವಜನಿಕವಾಗಿ ಮಾತನಾಡದಂತೆ ಪ್ರಜ್ಞಾ ಸಿಂಗ್ ಗೆ ಬಿಜೆಪಿ ನಾಯಕತ್ವ ಸೂಚನೆ

Update: 2019-08-30 08:41 GMT

ಹೊಸದಿಲ್ಲಿ, ಆ.30: ಬಿಜೆಪಿ ನಾಯಕರಿಗೆ ಹಾನಿಯುಂಟು ಮಾಡಲು ವಿಪಕ್ಷಗಳು ಮಾರಕ ಶಕ್ತಿ ಉಪಯೋಗಿಸುತ್ತಿವೆ. ಮಾಜಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಅವರ ಇತ್ತೀಚಿಗಿನ ಸಾವಿನ ಹಿಂದೆ `ಕೆಟ್ಟ ಶಕ್ತಿ' ಇದೆ ಎಂದು ಹೇಳಿಕೆ ನೀಡಿದ ಭೋಪಾಲ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಬಿಜೆಪಿ ನಾಯಕತ್ವ ಕೆಂಡವಾಗಿದ್ದು, ಆಕೆ ಇನ್ನು ಮುಂದೆ  ಸಾರ್ವಜನಿಕವಾಗಿ ಮಾತನಾಡದಂತೆ ಹಾಗೂ ವಿವಾದಿತ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದೆ.

ಮಧ್ಯ ಪ್ರದೇಶ ರಾಜ್ಯ ಬಿಜೆಪಿ ಕಚೇರಿಯಲ್ಲಿ  ಜೇಟ್ಲಿ ಹಾಗೂ ರಾಜ್ಯದ ಮಾಜಿ ಸಿಎಂ ಬಾಬುಲಾಲ್ ಗೌರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಯೋಜಿಸಲಾದ  ಸಭೆಯಲ್ಲಿ ಪ್ರಜ್ಞಾ ವಿವಾದಾತ್ಮಕ ಹೇಳಿಕೆ ನೀಡಿದ್ದರು.

“ನಾನು ಲೋಕಸಭಾ ಚುನಾವಣೆ ಸ್ಪರ್ಧಿಸುತ್ತಿದ್ದಾಗ ನಮಗೆ ಕೆಟ್ಟ ಕಾಲ ಬಂದಿದೆ ವಿಪಕ್ಷಗಳು ಬಿಜೆಪಿ ವಿರುದ್ಧ ಮಾರಕ ಶಕ್ತಿ ಬಳಸಬಹುದು ಎಂದು  ಒಬ್ಬ ಮಹಾರಾಜ ಜೀ ನನಗೆ ಹೇಳಿದರು.  ಅವರು ಹೇಳಿದ್ದನ್ನು ನಂತರ ನಾನು ಮರೆತಿದ್ದೆ. ಆದರೆ ಈಗ ನಮ್ಮ ಉನ್ನತ ನಾಯಕರು ನಮ್ಮನ್ನು ಒಬ್ಬೊಬ್ಬರಾಗಿಯೇ ಬಿಟ್ಟು ತೆರಳುತ್ತಿರುವುದನ್ನು ನೋಡಿದಾಗ ಆ ಮಹಾರಾಜ ಜೀ ಹೇಳಿದ್ದು ಸರಿಯಲ್ಲವೇ ಎಂದು ನಾನು ಯೋಚಿಸುವಂತಾಗಿದೆ'' ಎಂದು ಪ್ರಜ್ಞಾ ಹೇಳಿದ್ದರು.

ಇದೀಗ ಮಧ್ಯ ಪ್ರದೇಶ ಬಿಜೆಪಿ ಅಧ್ಯಕ್ಷ  ರಾಕೇಶ್ ಸಿಂಗ್ ಅವರು ಠಾಕುರ್‍ಗೆ ಎಚ್ಚರಿಕೆ ನೀಡಿದ್ದಾರೆನ್ನಲಾಗಿದ್ದು, ಮುಂದೆ ಅವರು ಈ ರೀತಿಯ ಹೇಳಿಕೆ ನೀಡಿದರೆ ಗಂಭೀರ ಕ್ರಮ ಕೈಗೊಳ್ಳಲಾವುದೆಂದು ತಿಳಿಸಿದ್ದಾರೆಂದು  ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News