ಚಂದ್ರಯಾನ-2: ಮೂನ್ ಲ್ಯಾಂಡರ್ ತಳ್ಳುವ ಪ್ರಕ್ರಿಯೆ ಯಶಸ್ವಿ

Update: 2019-09-03 14:35 GMT

ಬೆಂಗಳೂರು, ಸೆ. 3: ಚಂದ್ರಯಾನ- 2ರ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಗೆ ಹತ್ತಿರವಾಗುವಂತೆ, ಅದನ್ನು ಕೆಳಗಿನ ಕಕ್ಷೆಗೆ ತಳ್ಳುವ ಪ್ರಕ್ರಿಯೆಯನ್ನು ಮಂಗಳವಾರ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ.

ಚಂದ್ರಯಾನ- 2 ಅನ್ನು ಮತ್ತಷ್ಟು ಚಂದ್ರನ ಬಳಿಗೆ ಕೊಂಡೊಯ್ಯುವ ಮೊದಲ ಹಂತದ ಕೆಲಸ (ಮೂನ್ ಲ್ಯಾಂಡರ್ ಡಿ ಆರ್ಬಿಟ್ ಮೆನೊವರ್) ಯಶಸ್ವಿಯಾಗಿದೆ. ಕಕ್ಷೆಗೆ ಇಳಿಸುವ ಕೆಲಸ ಮಂಗಳವಾರ ಬೆಳಗ್ಗೆ 8.50ರ ಸುಮಾರಿನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಲ್ಯಾಂಡರ್‌ನ ಇಂಜಿನ್‌ನನ್ನು ಸುಮಾರು 4 ಸೆಕೆಂಡ್ ಕಾಲ ಚಾಲನೆ ಮಾಡಲಾಯಿತು ಎಂದು ಇಸ್ರೋ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಚಂದ್ರನೌಕೆಯ ಆರ್ಬಿಟರ್‌ನಿಂದ ಲ್ಯಾಂಡರ್ ಅನ್ನು ಪತ್ತೆಗೊಳಿಸುವಲ್ಲಿ ಯಶಸ್ವಿಯಾಗಿದ್ದ ಇಸ್ರೋ ಎರಡನೆ ಮಹತ್ವದ ಘಟ್ಟವಾದ ಮೊದಲ ಹಂತದ ಕಕ್ಷೆಗೆ ಇಳಿಸುವ ಕಾರ್ಯದಲ್ಲಿಯೂ ಯಶಸ್ಸು ಕಂಡಿದೆ.

ಬುಧವಾರ ಎರಡನೇ ಹಂತದ ಕಕ್ಷೆಗೆ ಇಳಿಸುವ ಕಾರ್ಯ ನಡೆಯುತ್ತಿದ್ದು, ಇದರಿಂದ ಲ್ಯಾಂಡರ್ ಚಂದ್ರನ ಹತ್ತಿರದ ಕಕ್ಷೆಗೆ ಇಳಿಯುವ ಮೂಲಕ ಅದರ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಈ ಇಳಿಸುವ ಕೆಲಸ ನಾಳೆ 3.30 ರಿಂದ 4.30ರವರೆಗೆ ನಡೆಯುತ್ತಿದೆ. ಇದರಿಂದ ಲ್ಯಾಂಡರ್, ಚಂದ್ರನ ಮೇಲ್ಮೈಗೆ ತೀರ ಹತ್ತಿರವಾಗುವ ಮೂಲಕ ಸೆ.7 ರಂದು ಅದರ ದಕ್ಷಿಣ ಧ್ರುವದಲ್ಲಿ ಇಳಿಯಲು ಅಣಿಯಾಗುತ್ತದೆ.

ಚಂದ್ರಯಾನ- 2ರ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಐತಿಹಾಸಿಕ ಗಳಿಗೆಗೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಇದೆ. ಇಂತಹ ಗಳಿಗೆಯನ್ನು ವೀಕ್ಷಿಸಲು ಇಡೀ ವಿಶ್ವವೇ ಕಾಯುತ್ತಿದೆ. ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸುವ ಮೊದಲ ದೇಶ ಭಾರತವಾಗಲಿದ್ದು, ಆ ದಿನಕ್ಕಾಗಿ ಇಸ್ರೋ ಎದುರು ನೋಡುತ್ತಿದೆ.

ಪ್ರಧಾನಿಗೆ ಆಹ್ವಾನ: ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಯಲಿರುವ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಪ್ರಧಾನಿ ಮೋದಿಯನ್ನು ಆಹ್ವಾನಿಸಿದ್ದು, ಸೆ.7 ರಂದು ಅವರು ಬೆಂಗಳೂರಿನಲ್ಲಿರುವ ಟೆಲಿಮೆಂಟರ್ ಟ್ರಾಕಿಂಗ್ ಅಂಡ್ ಕಮ್ಯಾಂಡ್ ನೆಟ್‌ವರ್ಕ್ ಕೇಂದ್ರಕ್ಕೆ ಆಹ್ವಾನಿಸಲಾಗಿದೆ. ಅಲ್ಲದೆ, ಈ ವೇಳೆ ನಾಸಾದ ಹಿರಿಯ ವಿಜ್ಞಾನಿಗಳು, ನಿವೃತ್ತ ಆಡಳಿತಾಧಿಕಾರಿಗಳು ಸೇರಿದಂತೆ ಜಗತ್ತಿನ ಹಲವು ಶ್ರೇಷ್ಠ ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News