ಸೌದೀಕರಣದ ಬಳಿಕ ಎಮಿರಾಟೀಕರಣದ ತೂಗುಕತ್ತಿ

Update: 2019-09-04 11:55 GMT
ಶೇಖ್ ಹಮ್ದನ್ (Photo: WAM)

ದುಬೈ, ಸೆ. 4: ದುಬೈಯಲ್ಲಿ ಸ್ವದೇಶಿಕರಣ ಮತ್ತು ಮಾನವ ಅಭಿವೃದ್ಧಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ದುಬೈ ಕಾರ್ಯಕಾರಿ ಮಂಡಳಿಯ ಪ್ರಧಾನ ಕಾರ್ಯಾಲಯಕ್ಕೆ ದುಬೈ ಯುವರಾಜ ಹಾಗೂ ದುಬೈ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಖ್ ಹಮ್ದನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಮಂಗಳವಾರ ಸೂಚನೆ ನೀಡಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಜ್ಞಾನ ಮತ್ತು ಮಾನವ ಅಭಿವೃದ್ಧಿ ಪ್ರಾಧಿಕಾರ, ದುಬೈ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಹಾಗೂ ಸ್ವದೇಶಿಕರಣದ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಇತರ ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಯುವರಾಜ ಸೂಚಿಸಿದ್ದಾರೆ.

ದುಬೈ ಸ್ವದೇಶಿಕರಣದ ಬಗ್ಗೆ ಯುಎಇಯ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್‌ರ ಮುನ್ನೋಟವನ್ನು ಗಮನದಲ್ಲಿಟ್ಟುಕೊಂಡು ಯೋಜನೆಯೊಂದನ್ನು ತಯಾರಿಸಲು ಹಾಗೂ ಉಪಕ್ರಮಗಳನ್ನು ಆರಂಭಿಸಲು ಅವರು ಈ ತಂಡಕ್ಕೆ ಎರಡು ವಾರಗಳ ಅವಧಿಯನ್ನು ನೀಡಿದ್ದಾರೆ.

ಈ ಪ್ರಕ್ರಿಯೆಯ ಪ್ರಗತಿಯನ್ನು ನಾನು ನೇರವಾಗಿ ಗಮನಿಸುತ್ತಿರುತ್ತೇನೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಸ್ವದೇಶಿಕರಣವು ಯುಎಇ ಸರಕಾರದ ಯೋಜನೆಯಾಗಿದ್ದು, ಉದ್ಯೋಗ ಕ್ಷೇತ್ರದಲ್ಲಿ, ಅದರಲ್ಲೂ ಮುಖ್ಯವಾಗಿ ಖಾಸಗಿ ಕ್ಷೇತ್ರದಲ್ಲಿ ಎಮಿರಾಟಿ (ಪ್ರಜೆಗಳು)ಗಳಿಗೆ ಆದ್ಯತೆ ನೀಡುವುದು ಇದರ ಉದ್ದೇಶವಾಗಿದೆ.

ಉದ್ಯೋಗ ಮಾರುಕಟ್ಟೆಯಲ್ಲಿ ಯುಎಇ ಪ್ರಜೆಗಳ ಸಂಖ್ಯೆಯನ್ನು ಹಾಗೂ ಆ ಮೂಲಕ ಆರ್ಥಿಕತೆಗೆ ಅವರ ದೇಣಿಗೆಯನ್ನು ಹೆಚ್ಚಿಸುವುದಕ್ಕೆ ಸ್ವದೇಶಿಕರಣ ಒತ್ತು ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News