ಶಿಕ್ಷಕರ ವರ್ಗಾವಣೆ ಸೇರಿ ಎಲ್ಲ ಸಮಸ್ಯೆಗಳು ಶೀಘ್ರ ನಿವಾರಣೆ: ಸಿಎಂ ಯಡಿಯೂರಪ್ಪ

Update: 2019-09-05 12:46 GMT

ಬೆಂಗಳೂರು, ಸೆ.5: ಶಿಕ್ಷಕರ ವರ್ಗಾವಣೆ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈ ಬಗ್ಗೆ ಶಿಕ್ಷಕರು ಹೆಚ್ಚು ಗೊಂದಲಕ್ಕೆ ಒಳಗಾಗದೆ ನವಭಾರತ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರ ವರ್ಗಾವಣೆ ಸಮಸ್ಯೆ ಪರಿಹರಿಸಲು ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಶಿಕ್ಷಕರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು. ಶಿಕ್ಷಕರೆಂದರೆ ಕೇವಲ ನಾಲ್ಕು ಅಕ್ಷರ ಕಲಿಸುವವರು ಮಾತ್ರವಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ, ಮೌಲ್ಯಯುತ ಜೀವನ ನಡೆಸಲು ಮಾರ್ಗದರ್ಶನ ಮಾಡುವವರಾಗಿದ್ದಾರೆ. ಉತ್ತಮ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇದರ ಜೊತೆಗೆ ಗ್ರಾಮೀಣ ಭಾಗದ ಶಿಕ್ಷಕರು ವಿಶೇಷ ಆಸಕ್ತಿ ಮೇರೆಗೆ ಗ್ರಾಮೀಣಾವೃದ್ಧಿಯಲ್ಲಿ ತೊಡಗಲಿ ಎಂದು ಅವರು ಆಶಿಸಿದರು.

ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಮಾತನಾಡಿ, ಕಡ್ಡಾಯ ವರ್ಗಾವಣೆ ಎಂಬುದನ್ನು ಹಿಂದಿನವರು ಯಾವ ಕಾರಣಕ್ಕೆ ಮಾಡಿದ್ದಾರೋ ಗೊತ್ತಿಲ್ಲ. ಕಡ್ಡಾಯ ನಿವೃತ್ತಿ ಹಾಗೂ ಕಡ್ಡಾಯ ಶಿಕ್ಷೆ ಎಂಬ ಪದವನ್ನು ನಾನು ಕೇಳಿದ್ದೇನೆ. ಆದರೆ, ಕಡ್ಡಾಯ ವರ್ಗಾವಣೆ ಎಂಬದು ಎಲ್ಲಿಯೂ ಇಲ್ಲ. ಹೀಗಾಗಿ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ಗೊಂದಲಗಳಿಗೂ ಶೀಘ್ರವೇ ಪರಿಹಾರ ಒದಗಿಸಲಾಗುವುದು ಎಂದು ಅವರು ಹೇಳಿದರು.

ನಾನು ಒಬ್ಬ ಸರಕಾರಿ ಶಾಲೆಯ ಶಿಕ್ಷಕಿಯ ಮಗನಾಗಿ ಶಿಕ್ಷಕರ ಸಮಸ್ಯೆಗಳು ಏನೆಂಬುದನ್ನು ಅರಿತಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಯಾರೊಬ್ಬರಿಗೂ ಅನುಮಾನ ಬೇಡ. ನೀವು ಪ್ರಾಮಾಣಿಕರಾಗಿ ಕೆಲಸ ಮಾಡಿ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಪುಟ್ಟಣ್ಣ, ಆರ್.ದೇವೇಗೌಡ ಸೇರಿದಂತೆ ಇಲಾಖೆ ಅಧಿಕಾರಿಗಳು, ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.

ಕಡ್ಡಾಯ ವರ್ಗಾವಣೆ ರದ್ದು

ಶಿಕ್ಷಕರಿಗೆ ಪ್ರತಿ ವರ್ಷ ಕಡ್ಡಾಯ ವರ್ಗಾವಣೆ ಮಾಡುವುದನ್ನು ಮುಂದಿನ ವರ್ಷದಿಂದ ರದ್ದು ಮಾಡುತ್ತೇವೆ. ಈ ಸಂಬಂಧ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲು ಮೇಲ್ಮನೆ ಸದಸ್ಯರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗುವುದು. ಈ ಸಮಿತಿಯ ವರದಿ ಆಧಾರದ ಮೇಲೆ ಕಡ್ಡಾಯ ವರ್ಗಾವಣೆಯನ್ನು ರದ್ದುಪಡಿಸಲಾಗುವುದು.

-ಸುರೇಶ್‌ ಕುಮಾರ್, ಶಿಕ್ಷಣ ಸಚಿವ

ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಶಿಕ್ಷಕರ ವೇತನ

ರಾಜ್ಯದ ಎಲ್ಲ ಶಾಲಾ ಶಿಕ್ಷಕರ ಒಂದು ದಿನದ ವೇತನ ಸೇರಿ ಒಟ್ಟು 50 ಕೋಟಿ ರೂ.ದೇಣಿಗೆ ನೀಡಿ, ಪ್ರವಾಹ ಮತ್ತು ಮಳೆಯಿಂದಾಗಿ ಹಾಳಾಗಿರುವ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡುವಂತೆ ಕೋರಿದ್ದಾರೆ. ಅದರಂತೆ, ಶೀಘ್ರವೇ ಶಾಲಾ ಕಟ್ಟಡದ ದುರಸ್ತಿ, ಇಲ್ಲವೆ ಪುನರ್ ನಿರ್ಮಾಣ ಮಾಡಲಾಗುವುದು.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News