ಬೆಂಗಳೂರು ವಿವಿಗೆ ಶಿಕ್ಷಣ ತಜ್ಞ ಎನ್.ಆರ್.ಶೆಟ್ಟಿ ಕೊಡುಗೆ ಅಪಾರ: ಮಾಜಿ ಸಿಎಂ ವೀರಪ್ಪ ಮೊಯ್ಲಿ

Update: 2019-09-05 13:00 GMT

ಬೆಂಗಳೂರು, ಸೆ.5: ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದ ಗುಂಪುಗಾರಿಕೆಗೆ ಕಡಿವಾಣ ಹಾಕಿ, ಮಾದರಿ ವಿಶ್ವವಿದ್ಯಾಲಯವಾಗಿ ರೂಪಿಸುವಲ್ಲಿ ಶಿಕ್ಷಣ ತಜ್ಞ ಪ್ರೊ.ಎನ್.ಆರ್.ಶೆಟ್ಟಿ ಕೊಡುಗೆ ಅಪಾರವೆಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಭಿಪ್ರಾಯಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರೊ.ಎನ್.ಆರ್.ಶೆಟ್ಟಿಗೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಕಡಲ ಬಿತ್ತರ ಗಗನದೆತ್ತರ ಅಭಿನಂದನಾ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರ ಸರಕಾರ ಅಲ್ಲಿನ ಉದ್ಯೋಗಕ್ಕಾಗಿ ಕರೆದಿದ್ದ ಅರ್ಜಿಗಳಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಅಭ್ಯರ್ಥಿಗಳು ಅರ್ಜಿ ಹಾಕುವಂತಿಲ್ಲ ಎಂಬ ಆದೇಶವನ್ನು ಉಲ್ಲೇಖಿಸಿತ್ತು. ಅಂದರೆ, ಆ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಷ್ಟರಮಟ್ಟಿಗೆ ಹದಗೆಟ್ಟಿತ್ತು. ಆ ವೇಳೆ ಕುಲಾಧಿಪತಿಗಳಾಗಿ ಬಂದ ಎನ್.ಆರ್.ಶೆಟ್ಟಿ ಎಲ್ಲವನ್ನೂ ಸರಿಪಡಿಸಿದರು. ನೇರ ನೋಟದಲ್ಲಿ ಸರಳ, ಸಜ್ಜನಿಕೆಯಂತೆ ಕಂಡರೂ, ಶಿಕ್ಷಣದ ವಿಚಾರದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ ಎಂದು ಅವರು ಹೇಳಿದರು.

ವಿಜ್ಞಾನ ಮತ್ತು ಕೈಗಾರಿಕೆಗಳೆರಡೂ ಒಟ್ಟಿಗೆ ಸಾಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡೇ ಪ್ರೊ.ಎನ್.ಆರ್.ಶೆಟ್ಟಿ, ಜಾತೀಯತೆ ಮತ್ತು ಮತೀಯ ಭಾವನೆಗಳಿಂದ ಮುಕ್ತರಾಗಿ ಶಿಕ್ಷಣ ಕ್ಷೇತ್ರವನ್ನು ಕಟ್ಟಿದರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕಾಣಿಕೆ ನೀಡಿರುವ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕದಿರುವುದು ದುರಂತವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಸಮಯ ಹಾಗೂ ನಗು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರಬೇಕು. ಆದರೆ, ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಸಮಯ, ನಗುವನ್ನು ಮರೆಸುತ್ತದೆ. ನಗು, ಸಮಯವನ್ನು ಕಳೆದುಹೋಗುವಂತೆ ಮಾಡುತ್ತದೆ. ನಗು ಮತ್ತು ಸಮಯ ಎರಡನ್ನೂ ಮಿಳಿತ ಮಾಡಿಕೊಂಡು ಪ್ರೊ.ಎನ್.ಆರ್ ಶೆಟ್ಟಿ ದೊಡ್ಡಮಟ್ಟಕ್ಕೆ ಬೆಳೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಲವರು ತಮ್ಮಲ್ಲಿರುವ ಜ್ಞಾನವನ್ನು ಸ್ವಾರ್ಥಕ್ಕೆ ಬಳಸುತ್ತಾರೆ. ಆದರೆ, ಶಿಕ್ಷಣ ತಜ್ಞ ಎನ್.ಆರ್.ಶೆಟ್ಟಿ ತಮ್ಮ ಬದುಕನ್ನು ಸಮಾಜಕ್ಕೆ ಜ್ಞಾನ, ಕ್ರಿಯಾಶೀಲತೆ, ವೃತ್ತಿಪರತೆಯನ್ನು ಹಂಚಿದ್ದಾರೆ. ಅವರ ಮಾರ್ಗದರ್ಶನ ಇಂದಿನ ಸಮಾಜಕ್ಕೆ ಅವಶ್ಯಕವೆಂದು ಅವರು ಹೇಳಿದರು.

ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್. ನಿವೃತ್ತ ನ್ಯಾ.ಎನ್.ಕೆ. ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ನರಹರಿ, ಸಾಹಿತಿ ಡಾ.ಸಿದ್ದಲಿಂಗಯ್ಯ ಹಾಗೂ ಪ್ರೊ.ಎನ್.ಆರ್.ಶೆಟ್ಟಿ, ಪತ್ನಿ ವತ್ಸಲಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News