ಗಡಿಪಾರು ಮಸೂದೆ ಹಿಂದೆಗೆತವನ್ನು ಚೀನಾ ಬೆಂಬಲಿಸುತ್ತದೆ: ಕ್ಯಾರೀ ಲ್ಯಾಮ್

Update: 2019-09-05 15:46 GMT

ಹಾಂಕಾಂಗ್, ಸೆ. 5: ಹಾಂಕಾಂಗ್‌ನ ಆರೋಪಿಗಳನ್ನು ಮಾತೃಭೂಮಿ ಚೀನಾಕ್ಕೆ ಗಡಿಪಾರು ಮಾಡುವ ಉದ್ದೇಶದ ಮಸೂದೆಯನ್ನು ಅಧಿಕೃತವಾಗಿ ವಾಪಸ್ ಪಡೆಯುವ ನನ್ನ ಸರಕಾರದ ನಿರ್ಧಾರವನ್ನು ಚೀನ ‘‘ಅರ್ಥಮಾಡಿಕೊಳ್ಳುತ್ತದೆ, ಗೌರವಿಸುತ್ತದೆ ಮತ್ತು ಬೆಂಬಲಿಸುತ್ತದೆ’’ ಎಂದು ಹಾಂಕಾಂಗ್ ನಾಯಕಿ ಕ್ಯಾರೀ ಲ್ಯಾಮ್ ಗುರುವಾರ ಹೇಳಿದ್ದಾರೆ.

ಹಲವು ತಿಂಗಳುಗಳಿಂದ ನಡೆಯುತ್ತಿರುವ ಬೃಹತ್ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳನ್ನು ತಣ್ಣಗಾಗಿಸಲು ನೆರವಾಗಬಹುದು ಎಂಬ ನಿರೀಕ್ಷೆಯೊಂದಿಗೆ ಗಡಿಪಾರು ಮಸೂದೆಯನ್ನು ಕ್ಯಾರೀ ಲ್ಯಾಮ್ ಬುಧವಾರ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕ್ಯಾರೀ ಲ್ಯಾಮ್, ದಿನೇ ದಿನೇ ಹಿಂಸಾತ್ಮಕಗೊಳ್ಳುತ್ತಿದ್ದ ಪ್ರತಿಭಟನೆಗಳ ಹೊರತಾಗಿಯೂ ವಿವಾದಾಸ್ಪದ ಗಡಿಪಾರು ಮಸೂದೆಯನ್ನು ವಾಪಸ್ ಪಡೆದುಕೊಳ್ಳಲು ನಿಮ್ಮ ಸರಕಾರಕ್ಕೆ ಇಷ್ಟು ಸಮಯ ಯಾಕೆ ಬೇಕಾಯಿತು ಎಂಬ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.

ಮಸೂದೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಚೀನಾದ ಬೆಂಬಲದೊಂದಿಗೆ ನನ್ನ ಸರಕಾರ ತೆಗೆದುಕೊಂಡಿತು ಎಂದು ಅವರು ಹೇಳಿದರು.

‘‘ನಾವು ಈ ನಿರ್ಧಾರವನ್ನು ಯಾಕೆ ತೆಗೆದುಕೊಂಡೆವು ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ ಹಾಗೂ ನನ್ನನ್ನು ಬೆಂಬಲಿಸುತ್ತಾರೆ ಎಂಬ ನಿಲುವಿಗೆ ಸೆಂಟ್ರಲ್ ಪೀಪಲ್ಸ್ ಸರಕಾರ ಬಂದಿದೆ’’ ಎಂದರು.

ಬುಧವಾರ ಟೆಲಿವಿಶನ್‌ನಲ್ಲಿ ಮಾತನಾಡಿದ ವೇಳೆ ಕಾಣಿಸಿಕೊಂಡಿರುವುದಕ್ಕಿಂತ ಕಡಿಮೆ ಒತ್ತಡದಲ್ಲಿರುವಂತೆ ಗುರುವಾರ ಅವರು ಕಂಡುಬಂದರು.

► ಇದು ಮೊದಲ ಹೆಜ್ಜೆ

ಗಡಿಪಾರು ಮಸೂದೆಯನ್ನು ಹಿಂದಕ್ಕೆ ಪಡೆದುಕೊಂಡಿರುವುದು ಹಾಂಕಾಂಗ್‌ನಲ್ಲಿನ ಅಶಾಂತಿಯನ್ನು ನಿವಾರಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಮೊದಲ ಹೆಜ್ಜೆಯಷ್ಟೆ ಎಂದು ಹಾಂಕಾಂಗ್ ನಾಯಕಿ ಕ್ಯಾರೀ ಲ್ಯಾಮ್ ಹೇಳಿದರು.

ಆದರೆ, ತಮ್ಮ ಉಳಿದ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂಬ ಪ್ರತಿಭಟನಕಾರರ ಕರೆಗಳನ್ನು ಅವರು ತಿರಸ್ಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News