ಐಎಂಎ ಮಾದರಿಯಲ್ಲೇ ಮತ್ತೊಂದು ಕಂಪೆನಿಯಿಂದ ವಂಚನೆ: ಮೂವರ ಬಂಧನ

Update: 2019-09-05 16:03 GMT

ಬೆಂಗಳೂರು, ಸೆ.5: ಐಎಂಎ ಕಂಪೆನಿ ಮಾದರಿಯಲ್ಲಿಯೇ ಗ್ರಾಹಕರಿಗೆ ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಮೂವರನ್ನು ಇಲ್ಲಿನ ಕಬ್ಬನ್‌ಪಾರ್ಕ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹರಿಯಾಣ ರಾಜ್ಯದ ಸುನೀಲ್ ಕುಮಾರ್ ಚೌಧರಿ(36), ಕೇರಳ ರಾಜ್ಯದ ಕಣ್ಣೂರು ನಿವಾಸಿ ರಿಜೇಶ್ ಹಾಗೂ ರಾಜೇಶ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ನಗರದ ಯುಬಿಸಿಟಿಯ ಖಾಸಗಿ ಹೊಟೇಲ್‌ವೊಂದರಲ್ಲಿ ಸರ್ವೀಸ್ ಹೆಸರಿನಲ್ಲಿ ಕಂಪೆನಿ ಆರಂಭಿಸಿದ ಆರೋಪಿಗಳು, 25 ಸಾವಿರ ರೂ. ಪಾವತಿಸಿದರೆ, ವಾರಕ್ಕೊಮ್ಮೆ 1,250 ರೂ. 20 ವಾರಗಳ ಕಾಲ ಹಣ ಬರಲಿದೆ ಎಂದು ಸಾರ್ವಜನಿಕರಿಗೆ ನಂಬಿಸಿದ್ದರು. ಅಷ್ಟೇ ಅಲ್ಲದೆ, ಕಂಪೆನಿಯ ಮುಖ್ಯ ಕಚೇರಿ ಗುರುಗಾಂವ್‌ನಲ್ಲಿದೆ ಎಂದಿದ್ದ ಆರೋಪಿಗಳು, ಒಟ್ಟು 2,500 ಗ್ರಾಹಕರಿಂದ ಸುಮಾರು 20 ಕೋಟಿ ರೂ.ಗಳನ್ನು ವಂಚಿಸಿರುವುದಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂಜೀವ್ ಕುಮಾರ್ ಎಂಬುವರು ನೀಡಿದ ದೂರಿನ್ವಯ ಆರೋಪಿಗಳನ್ನು ಬಂಧಿಸಿ, ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಿದ್ದು, ಈ ಸಂಬಂಧ ವಿಚಾರಣೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News