ಶೀಘ್ರದಲ್ಲೆ 1,500 ವೈದ್ಯರ ನೇಮಕಾತಿಗೆ ಕ್ರಮ: ಆರೋಗ್ಯ ಸಚಿವ ಬಿ.ಶ್ರೀರಾಮುಲು

Update: 2019-09-05 16:13 GMT

ಬೆಂಗಳೂರು, ಸೆ. 5: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 1,500 ವೈದ್ಯರ ಹುದ್ದೆಗಳನ್ನು ಶೀಘ್ರದಲ್ಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಮೂರನೆ ಮಹಡಿಯ ತಮ್ಮ ಕಚೇರಿಯಲ್ಲಿ ಪೂಜೆ ನೆರವೇರಿಸಿ ಕಚೇರಿ ಪ್ರವೇಶ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಗಳ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಕಣ್ಣಿಗೆ ಕಾಣುವಂತೆ ವ್ಯವಸ್ಥೆ ಸುಧಾರಿಸುವ ಆಶಯವನ್ನು ಹೊಂದಿದ್ದೇನೆ ಎಂದು ಹೇಳಿದರು.

ರಾಜ್ಯದ ಯಾವುದೇ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಖಾಲಿ ಇರುವ 1,500 ಎಂಬಿಬಿಎಸ್ ವೈದ್ಯರು ಮತ್ತು ತಜ್ಞ ವೈದ್ಯರ ನೇಮಕಾತಿಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿಯ ಆರೋಪಗಳಿವೆ. ಈ ಹಿಂದೆ 2009ರಲ್ಲಿ ತಾವು ಆರೋಗ್ಯ ಸಚಿವರಾಗಿದ್ದಾಗ 108 ಆಂಬುಲೆನ್ಸ್ ವ್ಯವಸ್ಥೆ ಜಾರಿ ಮಾಡಿದ್ದೆ. ಈಗಲೂ ಅಷ್ಟೇ ವ್ಯವಸ್ಥೆಯನ್ನು ಸವಾಲಾಗಿ ಸ್ವೀಕರಿಸಿ ಕಣ್ಣಿಗೆ ಕಾಣುವ ಬದಲಾವಣೆ ಮಾಡುತ್ತೇನೆ ಎಂದರು.

ಸರಕಾರಿ ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲಿ ವೈದ್ಯಕೀಯ ಪರೀಕ್ಷೆಗಳು ಸರಿಯಾಗಿ ನಡೆಯದೆ ಇರುವುದು ಗಮನಕ್ಕೆ ಬಂದಿದೆ. ಹೊಸದಿಲ್ಲಿಯ ಏಮ್ಸ್ ಮಾದರಿಯಲ್ಲೇ ಪ್ರಯೋಗ ಪರೀಕ್ಷೆಗಳನ್ನು ಜಾರಿ ಮಾಡುವ ಉದ್ದೇಶವಿದೆ ಎಂದ ಅವರು, ಸರಕಾರಿ ಆಸ್ಪತ್ರೆಗೆ ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗೆ ಬರುವವರಿಗೆ 15 ನಿಮಿಷದಲ್ಲಿ ರೋಗ ಪತ್ತೆ ಮಾಡುವ ತಂತ್ರಜ್ಞಾನವನ್ನು ಅಳವಡಿಸುವ ಚಿಂತನೆ ಇದೆ ಎಂದರು.

ಕ್ಯಾಂಟಿನ್ ವ್ಯವಸ್ಥೆ: ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಜತೆ ಅವರನ್ನು ಆರೈಕೆ ಮಾಡಲು ಬರುವವರಿಗೆ ವಾಸ್ತವ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ ಎಂದ ಅವರು, ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಅಗ್ಗದ ದರದಲ್ಲಿ ಉಪಾಹಾರ-ಊಟ ದೊರೆಯುವಂತೆ ಕ್ಯಾಂಟಿನ್ ಆರಂಭಿಸುವ ಚಿಂತನೆ ಇದೆ ಎಂದು ತಿಳಿಸಿದರು.

‘ಔಷಧ ಖರೀದಿಗೆ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಎಲ್ಲ ಅವ್ಯವಹಾರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನಿನ ಅನ್ವಯ ಸರಕಾರ ಕ್ರಮ ಕೈಗೊಳ್ಳಲಿದೆ. ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಅವರನ್ನು ಬಿಡುವ ಪ್ರಶ್ನೆಯೆ ಇಲ್ಲ’

-ಬಿ.ಶ್ರೀರಾಮುಲು, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News