ತಿಂಗಳಾಂತ್ಯಕ್ಕೆ ಚುನಾವನೆ: ಬಿಬಿಎಂಪಿ ಮೇಯರ್ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಪೈಪೋಟಿ

Update: 2019-09-05 16:20 GMT

ಬೆಂಗಳೂರು, ಸೆ.5: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವಧಿ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ, ಪಾಲಿಕೆಯ ಮೇಯರ್ ಸ್ಥಾನಕ್ಕಾಗಿ ಬಿಜೆಪಿ ಸದಸ್ಯರಲ್ಲಿ ಪೈಪೋಟಿ ನಡೆಯುತ್ತಿದ್ದು, ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.

ಹೊಸ ಮೇಯರ್ ಆಯ್ಕೆಗೆ ತಿಂಗಳ ಕೊನೆಯಲ್ಲೇ ಚುನಾವಣೆ ನಡೆಯಲಿದ್ದು, ಕ್ಷಿಪ್ರ ರಾಜಕಾರಣದ ಬೆಳವಣಿಗೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕೊನೆ ಅವಧಿಯಲ್ಲಿ ಮೇಯರ್ ಸ್ಥಾನ ಬಿಜೆಪಿ ಪಾಳಯಕ್ಕೆ ಒಲಿದು ಬಂದಿದೆ.

ಇನ್ನು, ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಮಾಜಿ ಉಪಮೇಯರ್ ಎಲ್.ಶ್ರೀನಿವಾಸ್, ಹಿರಿಯ ಸದಸ್ಯ ಉಮೇಶ್ ಶೆಟ್ಟಿ ಇಲ್ಲವೆ ಮಂಜುನಾಥ್ ರಾಜು ಅವರಲ್ಲಿ ಒಬ್ಬರು ಮೇಯರ್ ಆಗುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಇದೀಗ ಮೇಯರ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದ್ದು, ಈ ನಾಲ್ವರ ಜತೆಗೆ ನಾಗರಬಾವಿ ವಾರ್ಡ್ ಸದಸ್ಯ ಮೋಹನ್ ಕುಮಾರ್, ಕತ್ರಗುಪ್ಪೆವಾರ್ಡ್‌ನ ಸಂಗಾತಿ ವೆಂಕಟೇಶ್ ಹಾಗೂ ಕೋದಂಡರೆಡ್ಡಿ ಹೆಸರುಗಳು ಚಾಲ್ತಿಗೆ ಬಂದಿವೆ.

ಈ ಏಳು ಸದಸ್ಯರ ಜತೆಗೆ ಇನ್ನಿತರ ಹಲವಾರು ಹಿರಿಯ ಸದಸ್ಯರು ತಮ್ಮ ಗಾಡ್‌ಫಾದರ್‌ಗಳ ಮೂಲಕ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಸಂಗಾತಿ ವೆಂಕಟೇಶ್ ಪರ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕುಮಾರಸ್ವಾಮಿ ಲೇಔಟ್ ವಾರ್ಡ್‌ನ ಎಲ್.ಶ್ರೀನಿವಾಸ್ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಮಂಜುನಾಥ್ ರಾಜುವನ್ನು ಮೇಯರ್ ಆಗಿಸಲು ಡಿಸಿಎಂ ಡಾ.ಅಶ್ವಥ್ ನಾರಾಯಣ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಸಂಘ ಪರಿವಾರದಲ್ಲಿ ಉತ್ತಮ ವ್ಯಕ್ತಿ ಎಂದೇ ಬಿಂಬಿತರಾಗಿರುವ ಕೋದಂಡರೆಡ್ಡಿ ಅವರನ್ನು ಮೇಯರ್ ಆಗಿಸಲು ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಉಮೇಶ್ ಶೆಟ್ಟಿ ಇಲ್ಲವೆ ಮೋಹನ್ ಕುಮಾರ್ ಅವರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ನೀಡಲೇಬೇಕು ಎಂದು ಸಚಿವ ಸೋಮಣ್ಣ ಪಟ್ಟು ಹಿಡಿಯುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News