ಕೃಷಿ ಉತ್ಪನ್ನಗಳ ಖರೀದಿಗೆ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಸಂಪುಟ ಉಪ ಸಮಿತಿ

Update: 2019-09-06 15:21 GMT

ಬೆಂಗಳೂರು, ಸೆ. 6: ಕೃಷಿ-ತೋಟಗಾರಿಕೆ ಬೆಳೆಗಳ ಬೆಲೆ ಕುಸಿತದ ಸಂದರ್ಭದಲ್ಲಿ ಮಾರುಕಟ್ಟೆ ಮಧ್ಯಪ್ರವೇಶಿಸಿ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಹಾಗೂ ಖರೀದಿಸುವ ಸಂಬಂಧ ತೀರ್ಮಾನಿಸಲು ಸಂಪುಟ ಉಪ ಸಮಿತಿ ರಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಉಪ ಸಮಿತಿ ರಚನೆ ಅಧಿಕಾರವನ್ನು ಮುಖ್ಯಮಂತ್ರಿಗೆ ಸಂಪುಟ ನೀಡಿದೆ ಎಂದರು.

ಕಲ್ಯಾಣ ಕರ್ನಾಟಕ: ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಗೆ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ ಎಂದು ಮರು ನಾಮಕರಣ ಮಾಡಲು ಸಂಪುಟ ಸಭೆ ನಿರ್ಧರಿಸಿದೆ. ಮಂಡಳಿ ಹೆಸರು ಬದಲಾವಣೆ ಬೇಡಿಕೆ ಹಿನ್ನೆಲೆಯಲ್ಲಿ ಸಂಪುಟ ಮೇಲ್ಕಂಡ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಮಿತಿಯ ಅವಧಿ ಮುಗಿದಿದ್ದು, ಹೊಸ ಸಮಿತಿಯ ರಚನೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಧಿಕಾರ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ಅವರು ವಿವರ ನೀಡಿದರು.

ತ್ಯಾಜ್ಯ ನಿರ್ವಹಣಾ ನೀತಿ: ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಉಳಿದ ನಗರ ಸ್ಥಳೀಯ ಸಂಸ್ಥೆಗಳ ಘನತ್ಯಾಜ್ಯ ನಿರ್ವಹಣೆಗೆ ಹೊಸ ನೀತಿಯನ್ನು ಜಾರಿಗೆ ಸಂಪುಟ ಸಮ್ಮತಿಸಿದೆ. ಈ ಹೊಸ ನೀತಿಯಡಿ ಸ್ಥಳೀಯ ಸಂಸ್ಥೆಗಳು ಸೇವಾ ತೆರಿಗೆ ಸಂಗ್ರಹ ಬಗ್ಗೆಯೂ ತೀರ್ಮಾನ ಕೈಗೊಳ್ಳಲಿದೆ ಎಂದರು.

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಚಿವ ಸಂಪುಟ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಶಿಕಾರಿಪುರದ ಕೆರೆಗಳನ್ನು ತುಂಬುವ 850 ಕೋಟಿ ರೂ.ಯೋಜನೆಗೆ ಅನುಮೋದನೆ ನೀಡಲಾಗಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ 53 ಕೆರೆ ತುಂಬಿಸುವ ಯೋಜನೆಗೆ 660 ಕೋಟಿ ರೂ.ಒಪ್ಪಿಗೆ ನೀಡಲಾಗಿದ್ದು, ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ 38 ಕೆರೆ, ದಾವಣಗೆರೆಯ 1ಕೆರೆ ಸೇರಿದಂತೆ ಒಟ್ಟು 39 ಕೆರೆ ತುಂಬುವ 522 ಕೋಟಿ ರೂ.ಯೋಜನೆಗೂ ಅನುಮೋದನೆ ನೀಡಿದೆ ಎಂದು ಹೇಳಿದರು.

ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರ ವೇತನ ಹೆಚ್ಚಿಸುವ ಕೆಪಿಎಸ್ಸಿ ಸೇವಾ ಷರತ್ತುಗಳಿಗೆ ತಿದ್ದುಪಡಿ ತರಲು ಸಂಪುಟ ತೀರ್ಮಾನಿಸಿದೆ. ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ಹೊರತುಪಡಿಸಿ ಉಳಿದ ಎಲ್ಲ ವಲಯಗಳ ವೇತನ ಏರಿಕೆಯಾಗಿದ್ದು, 1ವರ್ಷದಿಂದ ಈ ಪ್ರಸ್ತಾಪ ಬಾಕಿ ಉಳಿದಿತ್ತು. ಇದೀಗ ಈ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದರು.

ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 735ಕೋಟಿ ರೂ.ಗಳ ಸಾಲ ಪಡೆದುಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮಕ್ಕೂ 250 ಕೋಟಿ ರೂ.ಅವಧಿ ಸಾಲ ಎತ್ತಲು ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ ಎಂದು ಮಾಧುಸ್ವಾಮಿ ಹೇಳಿದರು.

ಲೋಕಾಯುಕ್ತಕ್ಕೆ ನೂತನವಾಗಿ ಇಟಗಿ ಅವರನ್ನು ಪಿಪಿ ಆಗಿ ನೇಮಕ ಮಾಡುವ ಲೋಕಾಯುಕ್ತರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಮಾನವ ಹಕ್ಕುಗಳ ಪೀಠವನ್ನು ಮೂವರು ಸದಸ್ಯರ ಪೀಠವನ್ನಾಗಿ ಕಾರ್ಯಾರಂಭ ಮಾಡಲು ಸಚಿವ ಸಂಪುಟ ಸಮ್ಮತಿಸಿದೆ ಎಂದು ಅವರು ವಿವರ ನೀಡಿದರು.

ಪೊಲೀಸ್ ಸಿಬ್ಬಂದಿ ವೇತನ ಹೆಚ್ಚ: ರಾಘವೇಂದ್ರ ಔರಾದ್ಕರ್ ವರದಿ ಶಿಫಾರಸ್ಸಿನ ಅನ್ವಯ ಪೊಲೀಸ್ ಸಿಬ್ಬಂದಿ ವೇತನ ಹೆಚ್ಚಳಕ್ಕೆ ತೀರ್ಮಾನಿಸಿದ್ದು, ಆಗಸ್ಟ್ 1ರಿಂದಲೇ ಜಾರಿಗೆ ಬರುವಂತೆ ಸರಕಾರ ಹೊರಡಿಸಿರುವ ವೇತನ ಪರಿಷ್ಕರಣೆ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.

ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆಯಿಂದ 382ಕೋಟಿ ರೂ.ಗಳಷ್ಟು ಹೊರೆಯಾಗಲಿದ್ದು, ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿದೆ. ಔರಾದ್ಕರ್ ವರದಿಯನ್ವಯ ಸಿಬ್ಬಂದಿ ವೇತನ ಪರಿಷ್ಕರಣೆಗೆ ಜು.16ರಂದು ಹಿಂದಿನ ಸರಕಾರ ಒಪ್ಪಿಗೆ ನೀಡಿತ್ತು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News