ವೈದ್ಯಕೀಯ ನಿರ್ಲಕ್ಷದಿಂದ ಭಾರತೀಯ ಮಹಿಳೆ ಮೃತ್ಯು

Update: 2019-09-06 15:34 GMT

ದುಬೈ, ಸೆ.6: ವೈದ್ಯಕೀಯ ನಿರ್ಲಕ್ಷದಿಂದಾಗಿ ಯುಎಇಯಲ್ಲಿರುವ ಭಾರತೀಯ ಮಹಿಳೆಯೊಬ್ಬರ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ, ಅವರ ಗಂಡನಿಗೆ 39 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಶಾರ್ಜಾದಲ್ಲಿನ ನ್ಯಾಯಾಲಯವೊಂದು ಆದೇಶ ನೀಡಿದೆ ಎಂದು ‘ಗಲ್ಫ್ ನ್ಯೂಸ್’ ಗುರುವಾರ ವರದಿ ಮಾಡಿದೆ.

ಕೇರಳದ ಕೊಲ್ಲಂ ಜಿಲ್ಲೆಯ ನಿವಾಸಿ ಬ್ಲೆಸ್ಸಿ ಟಾಮ್ ಶಾರ್ಜಾ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರು 2015ರ ನವೆಂಬರ್‌ನಲ್ಲಿ ಖಾಸಗಿ ಕ್ಲಿನಿಕ್ ಒಂದರಲ್ಲಿ ಸ್ತನ ಸೋಂಕಿಗೆ ಚಿಕಿತ್ಸೆ ಪಡೆದಿದ್ದರು. ವೈದ್ಯರು ನೀಡಿದ ಆ್ಯಂಟಿಬಯಾಟಿಕ್‌ನಿಂದಾಗಿ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಬಳಿಕ ಅವರು ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.

ಬ್ಲೆಸ್ಸಿ ಟಾಮ್‌ರ ಗಂಡ ಜೋಸೆಫ್ ಅಬ್ರಹಾಮ್‌ಗೆ ನ್ಯಾಯಾಲಯ ವೆಚ್ಚವಾಗಿ ಇನ್ನೂ 2 ಲಕ್ಷ ದಿರ್ಹಮ್ (ಸುಮಾರು 39,04,709) ಪರಿಹಾರ ನೀಡುವಂತೆ ಶಾರ್ಜಾದ ಡಾ. ಸನ್ನಿ ಮೆಡಿಕಲ್ ಸೆಂಟರ್ ಮತ್ತು ಅದರ ಭಾರತೀಯ ವೈದ್ಯ ಡಾ. ದರ್ಶನ್ ಪ್ರಭಾತ್ ರಾಜಾರಾಮ್ ಪಿ. ನಾರಾಯಣಾರಗೆ ನ್ಯಾಯಾಲಯ ಆದೇಶ ನೀಡಿದೆ.

ಮಹಿಳೆಯ ಸಾವಿಗೆ ಕಾರಣನಾದ ವೈದ್ಯ ಭಾರತಕ್ಕೆ ಪಲಾಯನ ಮಾಡಿದ್ದು, ಭಾರತೀಯ ವೈದ್ಯಕೀಯ ಮಂಡಳಿ ಮತ್ತು ಇಂಟರ್‌ಪೋಲ್ ಮುಖಾಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News