ಕೆ.ಜೆ.ಜಾರ್ಜ್ ವಿರುದ್ಧ ಸೂಕ್ತ ತನಿಖೆಯಾಗಲಿ: ರವಿಕೃಷ್ಣಾರೆಡ್ಡಿ

Update: 2019-09-06 16:25 GMT

ಬೆಂಗಳೂರು, ಸೆ.6: ಮಾಜಿ ಸಚಿವ ಕೆ.ಜೆ.ಜಾರ್ಜ್ ಅಕ್ರಮವಾಗಿ ವಿದೇಶಗಳಿಗೆ ಹಣ ವರ್ಗಾವಣೆ ಮಾಡಿರುವ ಕುರಿತು ಸೂಕ್ತ ದಾಖಲೆಗಳು ಲಭ್ಯವಿದ್ದು, ಈ ಬಗ್ಗೆ ಈಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಒತ್ತಾಯಿಸಿದ್ದಾರೆ. 

ಶುಕ್ರವಾರ ಶಾಂತಿನಗರದಲ್ಲಿರುವ ಈಡಿ ಕಚೇರಿಗೆ ಭೇಟಿ ನೀಡಿ ಕೆ.ಜೆ.ಜಾರ್ಜ್ ವಿರುದ್ಧ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಕೆ.ಜೆ.ಜಾರ್ಜ್ ವಿದೇಶಗಳಲ್ಲಿ ಹಣ ಹೂಡಿಕೆಯನ್ನು ಪರಿಶೀಲಿಸಿದರೆ 10ರಿಂದ 15ಹಂತಗಳಲ್ಲಿ ಹಣ ವರ್ಗಾವಣೆ ಆಗಿರುವುದನ್ನು ಗಮನಿಸಬಹುದಾಗಿದೆ. ಇವರ ಬಹುತೇಕ ವಿದೇಶಿ ವ್ಯವಹಾರವು ಹವಾಲಾ ಹಣದ ಮೂಲಕ ನಡೆದಿರುವುದು ಗೊತ್ತಾಗಲಿದೆ ಎಂದು ಆರೋಪಿಸಿದರು.

ಕೆ.ಜೆ.ಜಾರ್ಜ್ ತಾವು ಭ್ರಷ್ಟಾಚಾರ ನಡೆಸಿದ ಹಣವನ್ನು ವಿದೇಶಗಳಿಗೆ ವರ್ಗಾವಣೆ ಮಾಡುವುದಕ್ಕಾಗಿಯೇ ಶೆಲ್ ಕಂಪೆನಿಗಳನ್ನು ಸೃಷ್ಟಿಸಿಕೊಂಡು, ಆ ಕಂಪೆನಿಗಳಲ್ಲಿ ಕುಟುಂಬದವರ ಹೆಸರಿನಲ್ಲಿ ಹಣ ಹೂಡಿಕೆ ಮಾಡಿ ಕೋಟ್ಯಂತರ ರೂ.ಹಣವನ್ನು ವಿದೇಶಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಹಲವು ದಾಖಲೆಗಳನ್ನು ಸಂಗ್ರಹಿಸಿ, ಅಧಿಕಾರಿಗಳಿಗೆ ನೀಡಿದ್ದೇವೆ. ಇದರ ಆಧಾರದ ಮೇಲೆ ಈಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಬೇಕೆಂದು ಅವರು ಹೇಳಿದರು.

ಅಮೆರಿಕಾದ ನ್ಯೂಯಾರ್ಕ್ ನ ಐಶಾರಾಮಿ ಅಪಾರ್ಟ್ಮೆಂಟ್ ನಲ್ಲಿ ಕೋಟ್ಯಂತರ ರೂ. ಮೌಲ್ಯದ ಫ್ಲಾಟ್ ಗಳನ್ನು ಕೆ.ಜೆ.ಜಾರ್ಜ್, ತಮ್ಮ ಹೆಂಡತಿ, ಮಗಳ ಹೆಸರಿನಲ್ಲಿ ಖರೀದಿಸಿದ್ದಾರೆ. ಹಾಗೂ ಆಸ್ಟ್ರೇಲಿಯಾದಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, 2013, 2018ರಲ್ಲಿ ನಡೆದ ಚುನಾವಣೆಯಲ್ಲಿ ಈ ಬಗ್ಗೆ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿಲ್ಲ. ಇದೆಲ್ಲದರ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಅವರು ಹೇಳಿದರು.

ನಮಗೆ ತಿಳಿದಿರುವ ಮಟ್ಟಿಗೆ, ಕೆ.ಜೆ.ಜಾರ್ಜ್ ಅವರ ಮಗಳಿಗಾಗಲಿ ಅಥವಾ ಅವರ ಅಳಿಯನಿಗಾಗಲಿ ಈ ಪ್ರಮಾಣದ ಆಸ್ತಿ ಕೊಳ್ಳಬಹುದಾದ ಆದಾಯವಿರುವುದಿಲ್ಲ. ಈ ಆಸ್ತಿಗಳನ್ನು ಕೊಳ್ಳಲು, ಅನೇಕ ವ್ಯಕ್ತಿಗಳ, ಶೆಲ್ ಕಂಪನಿಗಳ ಮತ್ತು ಬ್ಯಾಂಕ್ ಸಾಲದ ಮೂಲಕ ವಹಿವಾಟು ನಡೆಸಲಾಗಿದೆ. ಆದರೆ ಈ ಬ್ಯಾಂಕ್ ಸಾಲಗಳನ್ನು ಅತೀ ಶೀಘ್ರದಲ್ಲಿ ತೀರಿಸಲಾಗಿದೆ, ಹಾಗೆಯೇ ಈ ವಹಿವಾಟಿನ ದಿನಾಂಕಗಳು ಒಂದಕ್ಕೊಂದು ಹತ್ತಿರದಲ್ಲಿದ್ದು, ತಾಳೆಯಾಗುತ್ತವೆ. ಇದು ಮತ್ತಷ್ಟು ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಈ ಆಸ್ತಿಗಳನ್ನು ಕೆ.ಜೆ.ಜಾರ್ಜ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಅಕ್ರಮವಾಗಿ ಗಳಿಸಿರಬಹುದಾದ ಹಣವನ್ನು ಮನಿ ಲಾಂಡ್ರಿಂಗ್ ಮೂಲಕ ವಿದೇಶಗಳಿಗೆ ವರ್ಗಾಯಿಸಿ ಆಸ್ತಿ ಕೊಂಡಿರಬಹುದು. ಆದ್ದರಿಂದ ಈ ಬಗ್ಗೆ ಮತ್ತು ಅವರು ಹಾಗೂ ಅವರ ಕುಟುಂಬದವರು ಭಾರತದಲ್ಲಿ ಹೊಂದಿರುವ ಹತ್ತಾರು ಕಂಪನಿಗಳ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಕೋರಿ ಕರ್ನಾಟಕ ರಾಷ್ಟ್ರ ಸಮಿತಿಯು ಈಡಿಗೆ ದೂರು ಸಲ್ಲಿಸಿದೆ.

ನಮ್ಮ ಜನಪ್ರತಿನಿಧಿಗಳು ವರ್ಷದಲ್ಲಿ ಕೆಲವು ದಿನಗಳು ವಿದೇಶಕ್ಕೆ ಪ್ರವಾಸ ಹೋಗುವುದು ಕೇವಲ ಮೋಜು, ಮಸ್ತಿ ಮಾಡುವುದಕ್ಕಲ್ಲ. ವಿದೇಶಗಳಲ್ಲಿ ಸ್ಥಾಪಿಸಿರುವ ತಮ್ಮ ಉದ್ದಿಮೆಗಳನ್ನು ನೋಡಿಕೊಂಡು ಬರಲು. ಇಲ್ಲಿ ಕೇವಲ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಮಾತ್ರ ತಪ್ಪಿತಸ್ಥರಲ್ಲ. ರಾಜ್ಯವನ್ನು ಆಳುತ್ತಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನ ಬಹುತೇಕ ಜನಪ್ರತಿನಿಧಿಗಳು ಭ್ರಷ್ಟಾಚಾರ ನಡೆಸಿ ಅಕ್ರಮ ಹಣವನ್ನು ವಿದೇಶದಲ್ಲಿ ಕೂಡಿಟ್ಟಿದ್ದಾರೆ.

-ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News