ಡಾ.ಕೆ.ಸುಧಾಕರ್ ನೇಮಕದಲ್ಲಿ ನಿಯಮ ಪಾಲನೆಯಾಗಿಲ್ಲ: ಹೈಕೋರ್ಟ್ ಕಿಡಿ

Update: 2019-09-06 16:35 GMT

ಬೆಂಗಳೂರು, ಸೆ.6: ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಿರುವ ಪ್ರಕ್ರಿಯೆ ಅಕ್ರಮವಾಗಿದೆ ಎಂದು ಹೈಕೋರ್ಟ್ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದೆ.

ಡಾ.ಕೆ.ಸುಧಾಕರ್ ನೇಮಕ ಪ್ರಶ್ನಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಡಾ.ಕೆ.ಸುಧಾಕರ್ ಅವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರಾಗಿ ನೇಮಕ ಮಾಡಿರುವ ಪ್ರಕ್ರಿಯೆ ಅಕ್ರಮವಾಗಿದೆ. ಯಾವುದೇ ನಿಯಮಾವಳಿಯನ್ನು ಅನುಸರಿಸದೆ ನೇಮಕ ಮಾಡಲಾಗಿದೆ ಎಂದು ನ್ಯಾಯಪೀಠವು ಸರಕಾರದ ವಿರುದ್ಧ ಕಿಡಿಕಾರಿತು.

ಈ ವೇಳೆ ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ನೇಮಕ ಪ್ರಕ್ರಿಯೆ ಬಗ್ಗೆ ಮರುಪರಿಶೀಲಿಸಲು ಸಮಯಾವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠವು ಸೆ.20ರೊಳಗೆ ಸರಕಾರದ ವಿವರಣೆ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಸೂಚಿಸಿ, ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಆಗುವವರು ಪಾಂಡಿತ್ಯ ಅಥವಾ ಅದರಲ್ಲಿ ಜ್ಞಾನ ಹೊಂದಿರಬೇಕು. ಮಾಲಿನ್ಯ ನಿಯಂತ್ರಣದ ಬಗ್ಗೆ ಪಿಎಚ್ಡಿ ಅಥವಾ ಅದರದ್ದೇ ಪದವಿ ಪಡೆದಿರಬೇಕು. ಮಾಲಿನ್ಯ ನಿಯಂತ್ರಣ ಕೆಲಸ ಮಾಡಿದ ಅನುಭವ ಇರಬೇಕು. ಮಾಲಿನ್ಯ ನಿಯಂತ್ರಣದಲ್ಲಿ ವಿಜ್ಞಾನಿಗಳು, ಸಂಶೋಧನಾ ಸಂಸ್ಥೆಯಲ್ಲಿ, ಸಂಶೋಧಕರು, ಸಂಶೋದನೆ ಮಾಡಿರುವ ಅನುಭವ ಇರಬೇಕು. ಆದರೆ, ಈ ಯಾವ ಅನುಭವವೂ ಕೆ.ಸುಧಾಕರಗೆ ಇಲ್ಲ ಎಂದು ಅರ್ಜಿದಾರರು ಅರ್ಜಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News