ಒಂದು ಲಕ್ಷ ಸಕ್ರಿಯ ಸದಸ್ಯರ ನೋಂದಣಿ ಗುರಿ: ಅರವಿಂದ ಲಿಂಬಾವಳಿ

Update: 2019-09-06 17:06 GMT

ಬೆಂಗಳೂರು, ಸೆ.6: ಪಕ್ಷದ ಸಂಘಟನಾ ಪರ್ವದ ಭಾಗವಾಗಿ ಮುಂದುವರಿದಿರುವ ಸದಸ್ಯತ್ವ ಅಭಿಯಾನದ ಪರಾಮರ್ಶೆ ನಡೆಸಿದ ಕೋರ್ ಕಮಿಟಿ ಸಭೆಯು ಸೆ.8 ರಂದು ರಾಜ್ಯಾದ್ಯಂತ ಸಕ್ರಿಯ ಸದಸ್ಯರನ್ನು ನೋಂದಾಯಿಸುವ ಅಭಿಯಾನ ಕೈಗೊಳ್ಳಲು ತೀರ್ಮಾನಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು. 

ಶುಕ್ರವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಮೊದಲ ಕೋರ್ ಕಮಿಟಿ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನಗಳ ಕುರಿತು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಪಕ್ಷದ ಎಲ್ಲ ಕಾರ್ಯಕರ್ತರೂ ಸಕ್ರಿಯ ಸದಸ್ಯತ್ವ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತೀ ಬೂತ್‌ನಲ್ಲಿ ಇಬ್ಬರಂತೆ ರಾಜ್ಯದಲ್ಲಿ ಒಂದು ಲಕ್ಷ ಸಕ್ರಿಯ ಸದಸ್ಯರ ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಇದಾದ ನಂತರ ಬೂತ್ ಮತ್ತು ಮಂಡಲ ಸಮಿತಿಗಳ ರಚನೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ಹೇಳಿದರು.

ಇದಕ್ಕೆ ಪೂರ್ವಭಾವಿಯಾಗಿ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸೆ.9 ಮತ್ತು 10ರಂದು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸಕ್ರಿಯ ಸದಸ್ಯತ್ವದ ವರದಿಗಳನ್ನು ಪರಾಮರ್ಶೆ ನಡೆಸಲಿದ್ದಾರೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿರುವ 17 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ತಯಾರಿ ಆರಂಭಿಸಲು ಬಿಜೆಪಿ ತೀರ್ಮಾನಿಸಿದೆ. ರಾಜೀನಾಮೆ ನೀಡಿರುವ ಶಾಸಕರನ್ನು ಹಿಂದಿನ ಸ್ಪೀಕರ್ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಈ ಶಾಸಕರು ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಆರಂಭಿಸಿದ್ದಾರೆ. ಇವರಲ್ಲಿ ಯಾರು ಬಿಜೆಪಿ ಸೇರುತ್ತಾರೆ ಎನ್ನುವುದಕ್ಕಿಂತ ಈ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವುದು ನಮ್ಮ ಗುರಿ ಎಂದು ಅವರು ತಿಳಿಸಿದರು.

2020ರ ಜೂನ್ ತಿಂಗಳಲ್ಲಿ ನಡೆಯಲಿರುವ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳ ಚುನಾವಣೆಗೆ ತಯಾರಿ ಆರಂಭಿಸಲು ನಿರ್ಧರಿಸಲಾಗಿದ್ದು ಇದಕ್ಕೆ ಮತದಾರರನ್ನು ನೋಂದಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಅಕ್ಟೋಬರ್ ತಿಂಗಳಿನಲ್ಲಿ ಮತದಾರರ ನೋಂದಣಿ ಆರಂಭಗೊಳ್ಳಲಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯದ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಒಟ್ಟಾರೆಯಾಗಿ ಜನಪರ ಮತ್ತು ಜನೋಪಯೋಗಿ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾವಾಗಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳಲ್ಲಿ ಪಕ್ಷ ಕೈಜೋಡಿಸಿ ಎಲ್ಲ ರೀತಿಯ ಸಹಕಾರ ನೀಡಲು ನಿರ್ಧರಿಸಲಾಗಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸರಕಾರ ಮತ್ತು ಪಕ್ಷ ಜೊತೆಯಾಗಿ ಹೆಜ್ಜೆ ಇಡಬೇಕೆಂದು ಕೋರ್ ಕಮಿಟಿ ಸಭೆ ತೀರ್ಮಾನಿಸಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News