ಬ್ಯಾಂಕ್ ವಿಲೀನ: ಲಾಭದ ಖಾಸಗೀಕರಣ-ನಷ್ಟದ ರಾಷ್ಟ್ರೀಕರಣ!

Update: 2019-09-06 18:26 GMT

ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ಸರಕಾರಕ್ಕೆ 2017ರಲ್ಲಿ ಕೊಟ್ಟ ವರದಿಯ ಪ್ರಕಾರವೇ ಕೇವಲ 100 ದೊಡ್ಡ ಕಂಪೆನಿಗಳು ಭಾರತದ ಬ್ಯಾಂಕುಗಳಿಗೆ ಏನಿಲ್ಲವೆಂದರೂ 11 ಲಕ್ಷ ಕೋಟಿ ರೂಪಾಯಿಗಳಷ್ಟು ನಾಮ ಹಾಕಿವೆ. ಆದರೆ ಈ ವರದಿಯನ್ನು ಮೋದಿ ಸರಕಾರ ಮುಚ್ಚಿ ಹಾಕಿತ್ತು. ಕೊಟ್ಟ ಹಣ ವಾಪಸ್ ಬರದೇ ಇದ್ದುದರಿಂದ ಅವರಿಗೆ ಸಾಲ ಕೊಟ್ಟ ರಾಷ್ಟ್ರೀಕೃತ ಬ್ಯಾಂಕುಗಳು ಇಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಬಿಕ್ಕಟ್ಟು ಈಗ ಕೇವಲ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾದೆ ಇಡೀ ಆರ್ಥಿಕತೆಗೆ ಹರಡಿಕೊಂಡಿದೆ.

ಅಂಗೈ ಹುಣ್ಣನ್ನು ನೋಡಲು ಕನ್ನಡಿ ಬೇಕಿಲ್ಲ. ಬ್ಯಾಂಕ್‌ಗಳ ವಿಲೀನದ ಹಿಂದಿನ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳಲೂ ಅಷ್ಟೆ. ದೊಡ್ಡ ಪಾಂಡಿತ್ಯವೇನೂ ಬೇಕಿಲ್ಲ.

 ಇದೇ ಆಗಸ್ಟ್ 30ರಂದು ಭಾರತ ಸರಕಾರವು 10 ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸಿ ನಾಲ್ಕು ದೊಡ್ಡ ಬ್ಯಾಂಕುಗಳನ್ನಾಗಿ ಮಾಡುವುದಾಗಿ ಘೋಷಿಸಿದೆ. ಇದರಲ್ಲಿ ಕರ್ನಾಟಕ ಮೂಲದ ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕಿನೊಂದಿಗೆ ಹಾಗೂ ಸಿಂಡಿಕೇಟ್ ಬ್ಯಾಂಕು ಕೆನರಾ ಬ್ಯಾಂಕಿನೊಂದಿಗೆ ವಿಲೀನಗೊಳ್ಳಲಿದೆ. ಇದಕ್ಕೆ ಮುಂಚೆ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಮೂಲದ ವಿಜಯ ಬ್ಯಾಂಕನ್ನು ಕೂಡಾ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲಾಗಿತ್ತು. ಹಾಗೂ 2017ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ನೊಂದಿಗೆ ವಿಲೀನಗೊಳಿಸಲಾಗಿತ್ತು. ಹೀಗಾಗಿ ಈಗ ಕರ್ನಾಟಕ ಮೂಲದ ಎಲ್ಲಾ ಬ್ಯಾಂಕುಗಳು ತಮ್ಮ ಮೂಲ ಚಹರೆಯನ್ನು ಹಾಗೂ ಮೂಲ ಉದ್ದೇಶವನ್ನು ಕಳೆದುಕೊಂಡಿವೆ. ಇತ್ತೀಚೆಗೆ ನಡೆದ ಈ ಮೂರನೇ ಸುತ್ತಿನ ಬ್ಯಾಂಕ್ ವಿಲೀನ ಪ್ರಕ್ರಿಯೆಯ ನಂತರದಲ್ಲಿ ದೇಶದಲ್ಲಿದ್ದ ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆ 27ರಿಂದ ಕೇವಲ 12ಕ್ಕಿಳಿದಿದೆ.

ಇದು 1969ರಲ್ಲಿ ನಡೆದ ಬ್ಯಾಂಕುಗಳ ರಾಷ್ಟ್ರೀಕರಣದ ಉದ್ದೇಶಕ್ಕೆ ತದ್ವಿರುದ್ಧವಾಗಿದೆ. ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ನಾಲ್ಕು ಉದ್ದೇಶಗಳಿತ್ತು.

ಅ) ದೇಶದ ಆರ್ಥಿಕತೆಗೆ ಪೂರಕವಾಗಿ ಜನಸಾಮಾನ್ಯರ ಉಳಿತಾಯದ ಹಣವನ್ನು ತೊಡಗಿಸಿಕೊಳ್ಳುವುದು.

ಆ)ಜನರ ಉಳಿತಾಯದ ಹಣಕ್ಕೆ ಖಾತರಿ ಹಾಗೂ ಬಡ್ಡಿಯನ್ನು ಒದಗಿಸುವುದು.

ಇ) ಸರಕಾರ ಹಾಗೂ ಸಾಮಾನ್ಯರಿಗೆ ಸುಲಭದ ದರದಲ್ಲಿ ಸಾಲ ಒದಗಿಸುವುದು.

  

 ಈ) ಬ್ಯಾಂಕಿಂಗ್ ಉದ್ಯಮದಲ್ಲಿ ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದು. 1969ರಿಂದ 1991ರವರೆಗೆ ಭಾರತದಲ್ಲಿ ಬ್ಯಾಂಕಿಂಗ್ ಉದ್ಯಮದ ಹಾದಿ ಈ ದಿಕ್ಕಿನಲ್ಲೇ ಇತ್ತು. ಒಂದು ಉದಾಹರಣೆ ನೀಡುವುದಾದರೆ, 2017-18ರ ಸಾಲಿನ ಲೆಕ್ಕಾಚಾರದಲ್ಲಿ ದೇಶದ ಎಲ್ಲಾ ಬ್ಯಾಂಕುಗಳು ಒಟ್ಟಾರೆಯಾಗಿ ಜನರಿಂದ ಸಂಗ್ರಹಿಸಿರುವ ಒಟ್ಟಾರೆ ಡಿಪಾಸಿಟುಗಳ ಮೊತ್ತ 117 ಲಕ್ಷ ಕೋಟಿ ರೂ.ಗಳು. ಅದರಲ್ಲಿ 70-80 ಲಕ್ಷ ಕೋಟಿ ರೂಪಾಯಿಗಳನ್ನು ಆ ಬ್ಯಾಂಕುಗಳು ಸರಕಾರಗಳಿಗೆ, ಉದ್ಯಮಪತಿಗಳಿಗೆ ಮತ್ತು ಜನರಿಗೆ ಸಾಲ ಕೊಡುತ್ತಿವೆ ಎಂದರೆ ದೇಶದ ಆರ್ಥಿಕತೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಮಹತ್ವವೇನೆಂದು ಅರ್ಥವಾಗುತ್ತದೆ. ಹಾಗಿದ್ದರೂ ಮೊದಲಿಂದಲೂ ಈ ಬ್ಯಾಂಕಿಂಗ್ ರಾಷ್ಟ್ರೀಕರಣದ ಅತಿ ದೊಡ್ಡ ಫಲಾನುಭವಿಗಳೆಂದರೆ ಈ ದೇಶದ ದೊಡ್ಡ ದೊಡ್ಡ ಉದ್ಯಮಗಳೇ. ಆದರೂ ಸಣ್ಣಪುಟ್ಟ ಉದ್ಯಮಗಳಿಗೆ ಹಾಗೂ ಮಧ್ಯಮ ಹಾಗೂ ದೊಡ್ಡ ರೈತಾಪಿಗಳಿಗೂ ಬ್ಯಾಂಕಿನಿಂದ ಸುಲಭ ದರದಲ್ಲಿ ಸಾಲ ಸಿಗುತ್ತಿತ್ತು. ಕೋಟ್ಯಂತರ ಗ್ರಾಹಕರಿಗೂ ಬ್ಯಾಂಕ್ ಸೇವೆ ದಕ್ಕಲು ಪ್ರಾರಂಭವಾಗಿತ್ತು. ಇವೆಲ್ಲವೂ 1991ರಿಂದ ಬದಲಾಯಿತು. ಸೇವೆಗಿಂತ ಲಾಭವೇ ಬ್ಯಾಂಕುಗಳ ಧ್ಯೇಯವಾಯಿತು. ಹೀಗಾಗಿ ಸಣ್ಣಪುಟ್ಟವರಿಂದ ಡಿಪಾಸಿಟುಗಳು ಸಂಗ್ರಹವಾದರೂ ದೊಡ್ಡ ಮಟ್ಟದ ಸಾಲಗಳು ಮಾತ್ರ ದೊಡ್ಡ ದೊಡ್ಡ ಉದ್ಯಮಗಳಿಗೆ ಮಾತ್ರ ಮೀಸಲಾಗತೊಡಗಿತು. 2004-2019ರ ನಡುವೆಯಂತೂ ಸಾಲ ವಾಪಸ್ ಮಾಡುವ ಸಾಮರ್ಥ್ಯ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಗಣಿಸದೆ ಹತ್ತಾರು ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ದೊಡ್ಡ ಉದ್ಯಮಗಳಿಗೆ ನೀಡಲಾಯಿತು.

ಆದರೆ ಈ ಅವಧಿಯಲ್ಲಿ ನೀಡಿದ ಬಹುಪಾಲು ಸಾಲಗಳು ಹಿಂದಿರುಗಿ ಬರಲೇ ಇಲ್ಲ. ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ಸರಕಾರಕ್ಕೆ 2017ರಲ್ಲಿ ಕೊಟ್ಟ ವರದಿಯ ಪ್ರಕಾರವೇ ಕೇವಲ 100 ದೊಡ್ಡ ಕಂಪೆನಿಗಳು ಭಾರತದ ಬ್ಯಾಂಕುಗಳಿಗೆ ಏನಿಲ್ಲವೆಂದರೂ 11 ಲಕ್ಷ ಕೋಟಿ ರೂಪಾಯಿಗಳಷ್ಟು ನಾಮ ಹಾಕಿವೆ. ಆದರೆ ಈ ವರದಿಯನ್ನು ಮೋದಿ ಸರಕಾರ ಮುಚ್ಚಿ ಹಾಕಿತ್ತು. ಕೊಟ್ಟ ಹಣ ವಾಪಸ್ ಬರದೇ ಇದ್ದುದರಿಂದ ಅವರಿಗೆ ಸಾಲ ಕೊಟ್ಟ ರಾಷ್ಟ್ರೀಕೃತ ಬ್ಯಾಂಕುಗಳು ಇಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಬಿಕ್ಕಟ್ಟು ಈಗ ಕೇವಲ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಇಡೀ ಆರ್ಥಿಕತೆಗೆ ಹರಡಿಕೊಂಡಿದೆ. ಏಕೆಂದರೆ ಆರ್ಥಿಕತೆಯ ಪುನಶ್ಚೇತನಕ್ಕೆ ಅಂದರೆ ಸರಕಾರದ ವೆಚ್ಚಕ್ಕೆ ಅಥವಾ ಗ್ರಾಹಕರ ವೆಚ್ಚಕ್ಕೆ ಕೊಡಬೇಕಿರುವಷ್ಟು ಸಾಲವನ್ನು ಕೊಡಲು ಬ್ಯಾಂಕುಗಳು ಹಿಂದುಮುಂದು ನೋಡುವಂತಾಗಿದೆ. ಆದ್ದರಿಂದ ಇಂದು ಬ್ಯಾಂಕಿಂಗ್ ಕ್ಷೇತ್ರವು ಎದುರಿಸುತ್ತಿರುವ ಸಾಲ ಮರುಪಾವತಿಯಾಗದ ಬಿಕ್ಕಟ್ಟು (ಎನ್‌ಪಿಎ) ಪರಿಹಾರವಾಗದೆ ಆರ್ಥಿಕತೆ ಚೇತರಿಸಿಕೊಳ್ಳುವುದು ಕಷ್ಟ ಎಂಬ ಸ್ಥಿತಿ ಬಂದೊದಗಿದೆ.

 ಆರ್ಥಿಕತೆ ಕಷ್ಟ ಎದುರಿಸುತ್ತಿರಲು ಪ್ರಧಾನ ಕಾರಣ ಬೇಡಿಕೆಯ ಬಿಕ್ಕಟ್ಟು. ಅಂದರೆ ಗ್ರಾಹಕ ವಸ್ತುಗಳನ್ನು ಕೊಳ್ಳಲು ಜನರ ಬಳಿ ಹಣವಿಲ್ಲ. ಆದರೆ ಸರಕಾರವು ಅದನ್ನು ಮರೆಮಾಚಿ ಅದನ್ನು ಹೂಡಿಕೆಯ ಬಿಕ್ಕಟ್ಟು ಎಂದು ಹೇಳುತ್ತಿದೆ. ಎಂದರೆ ದೊಡ್ಡ ಉದ್ಯಮಗಳು ಆರ್ಥಿಕತೆಯಲ್ಲೂ ಹಣ ಹೂಡಲು ಬೇಕಾದ ಸಾಲ ಬಂಡವಾಳ ದೊರೆಯದೇ ಇರುವುದರಿಂದ ಆರ್ಥಿಕ ಬಿಕ್ಕಟ್ಟು ಸಂಭವಿಸಿದೆ ಎಂದು ಸರಕಾರ ಹೇಳುತ್ತಿದೆ. ಆ ಮೂಲಕ ಈ ಎನ್‌ಪಿಎ ಎಂಬ ಕಾರ್ಪೊರೇಟ್ ಉದ್ಯಮಪತಿಗಳ ಪಾಪದ ಹೊರೆಯನ್ನು ಲಾಭದಾಯಕ ಸಾರ್ವಜನಿಕ ಕಂಪೆನಿಗಳಿಗೆ, ಲಾಭದಲ್ಲಿರುವ ಸರಕಾರಿ ಬ್ಯಾಂಕುಗಳಿಗೆ ಹಾಗೂ ಗ್ರಾಹಕರ ಮೇಲೆ ವರ್ಗಾಯಿಸಲು ಪ್ರಾರಂಭಿಸುತ್ತಿದೆ.

 ಅಂದರೆ ಸಾಲ ವಾಪಸ್ ಮಾಡದ ಕಾರ್ಪೊರೇಟ್ ಕಂಪೆನಿಗಳು ಬ್ಯಾಂಕುಗಳಿಗೆ ಬಾಕಿ ಇರುವ ಸಾಲವನ್ನು ವಸೂಲಿ ಮಾಡದೆ ಅದನ್ನು ರದ್ದು ಮಾಡಿ, ಅದರಿಂದ ಉಂಟಾಗುವ ಖೋತಾ ಹಣವನ್ನು ಜನರಿಂದ/ ಸರಕಾರದಿಂದ ವಸೂಲಿ ಮಾಡಹೊರಟಿದೆ. ಬ್ಯಾಂಕುಗಳ ವಿಲೀನ ಯೋಜನೆಯೂ ಆ ಕಾರ್ಪೊರೇಟ್ ಉದ್ಯಮಗಳ ಪರವಾದ ಷಡ್ಯಂತ್ರದ ಭಾಗವೇ ಆಗಿದೆ. ಉದಾಹರಣೆಗೆ ಅಪಾರವಾದ ವಸೂಲಾಗದ ಸಾಲವನ್ನು ಹೊಂದಿರುವ ದೇನಾ ಬ್ಯಾಂಕನ್ನು ಇದ್ದಿದ್ದರಲ್ಲಿ ಉತ್ತಮ ಸ್ಥಿತಿಯಲ್ಲಿರುವ ವಿಜಯ ಬ್ಯಾಂಕ್ ಮತ್ತು ಬರೋಡಾ ಬ್ಯಾಂಕಿನಲ್ಲಿ ವಿಲೀನಗೊಳಿಸಿ ಒಂದೇ ಬ್ಯಾಂಕ್ ಮಾಡಲಾಗಿದೆ. ಆದರೆ ಆ ಮೂಲಕ ದೇನಾ ಬ್ಯಾಂಕ್ ಕೊಟ್ಟ ಸಾಲದ ಹೊರೆಯನ್ನು ಆ ಇತರ ಎರಡು ಬ್ಯಾಂಕುಗಳು ಅರ್ಥಾತ್ ಅದರ ಗ್ರಾಹಕರು ಹೊರುವಂತಾಗಿದೆ. ಹಾಗೆಯೇ 2017ರಲ್ಲಿ ಎಸ್‌ಬಿಐನಲ್ಲಿ ಐದು ಬ್ಯಾಂಕುಗಳು ವಿಲೀನವಾದ ನಂತರ ಕನಿಷ್ಠ ಡಿಪಾಸಿಟ್ ಮೊತ್ತವನ್ನು ದೊಡ್ಡ ನಗರಗಳಲ್ಲಿ ರೂ. 5,000ಕ್ಕೂ, ಸಣ್ಣ ನಗರಗಳಲ್ಲಿ ರೂ. 2,000ಕ್ಕೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೂ. 1,000ಕ್ಕೂ ಏರಿಸಲಾಗಿದೆ. ಅದಕ್ಕಿಂತ ಕಡಿಮೆ ಡಿಪಾಸಿಟ್ ಇರುವವರಿಗೆ ದಂಡವನ್ನು ವಿಧಿಸಲು ಪ್ರಾರಂಭಿಸಲಾಗಿದೆ. 2018ರಲ್ಲಿ ಎಸ್‌ಬಿಐ ಬ್ಯಾಂಕೊಂದೇ ಇಂತಹ ದಂಡಗಳ ಮೂಲಕ 1,783 ಕೋಟಿ ರೂ.ಯನ್ನು ತನ್ನ ಗ್ರಾಹಕರಿಂದ ವಸೂಲಿ ಮಾಡಿದೆ ಹಾಗೂ ಎಟಿಎಂ ಬಳಸುವ ಗ್ರಾಹಕರಿಗೆ ಈವರೆಗೆ ಇಲ್ಲದ ಶುಲ್ಕಗಳನ್ನು ಹೇರುತ್ತಾ, ತನ್ನದೇ ಹಣವನ್ನು ದಿನಕ್ಕೆರಡು ಬಾರಿಗಿಂತ ಹೆಚ್ಚು ಸಾರಿ ಹಿಂಪಡೆದರೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಾ ಹೆಚ್ಚುವರಿಯಾಗಿ 5,000 ಕೋಟಿ ರೂ. ಸಂಗ್ರಹಿಸಿದೆ. ಆದರೆ ಅದೇ ವರ್ಷ ದೊಡ್ಡ ಉದ್ಯಮಪತಿಗಳು ಎಸ್‌ಬಿಐಗೆ ಬಾಕಿ ಇದ್ದ ಸಾಲದಲ್ಲಿ 27,000 ಕೋಟಿ ರೂ.ಯನ್ನು ಮನ್ನಾ ಮಾಡಲಾಗಿದೆ. ಇದರ ಜೊತೆಗೆ ಕಾರ್ಪೊರೇಟ್ ಸಾಲ ವಾಪಸಾಗದೇ ಇದ್ದುದರಿಂದ ಆಗಿರುವ ನಷ್ಟವನ್ನು ಭರ್ತಿ ಮಾಡಲು ಬಜೆಟ್‌ನಿಂದಲೂ 2 ಲಕ್ಷ ಕೋಟಿ ರೂ. ನೀಡಲಾಗುತ್ತಿದೆ. ಅಂದರೆ ಜನರ ತೆರಿಗೆ ಹಣವನ್ನು ಹಗಲು ದರೋಡೆ ಮಾಡಿ ಕಾರ್ಪೊರೇಟ್ ಕಂಪೆನಿಗಳು ಮಾಡಿದ ಸಾಲಕ್ಕೆ ವಜಾ ಮಾಡಿಕೊಳ್ಳಲಾಗುತ್ತಿದೆ.

ಆದರೆ ಇವೆಲ್ಲದರಿಂದ ಆರ್ಥಿಕತೆ ಪುನಶ್ಚೇತನಗೊಂಡೀತೇ? ದೇಶ ಅಭಿವೃದ್ಧಿ ಹೊಂದೀತೇ?

ಇಂದು ಆರ್ಥಿಕತೆ ಪುನಶ್ಚೇತನಗೊಳ್ಳಬೇಕೆಂದರೆ ಜನರ ಆದಾಯ ಹೆಚ್ಚಬೇಕು. ಉಳಿತಾಯಗಳ ಬಡ್ಡಿ ಹೆಚ್ಚಬೇಕು ಮತ್ತು ಸುಲಭದ ದರದಲ್ಲಿ ಸಾಲ ದೊರೆಯಬೇಕು. ಆ ಮೂಲಕ ಜನರ ಕೊಳ್ಳುವ ಶಕ್ತಿ ಹೆಚ್ಚಬೇಕು. ಅಂದರೆ ಬ್ಯಾಂಕುಗಳು ವಿಲೀನಗೊಂಡು ದೊಡ್ದದಾಗುವುದಕ್ಕಿಂತ ವಿಸ್ತರಣೆಗೊಂಡು ಹೆಚ್ಚು ಜನರಿಗೆ ತಲುಪುವಂತಾಗಬೇಕು. ಹಾಗೆ ನೋಡಿದರೆ ಇಂದು ಭಾರತವು ಇಡೀ ವಿಶ್ವದ ಸರಿಸಮಾನ ರಾಷ್ಟ್ರಗಳಿಗೆ ಹೋಲಿಸಿದಾಗ ಅತ್ಯಂತ ಕಡಿಮೆ ಬ್ಯಾಂಕಿಂಗ್ ಹರಹು ಇರುವ ದೇಶವಾಗಿದೆ. ಹೀಗಾಗಿ ಆಗಬೇಕಿದ್ದು ಬ್ಯಾಂಕುಗಳ ವಿಸ್ತರಣೆಯೇ ವಿನಾ ವಿಲೀನವಲ್ಲ.

 ಆದರೆ ಆಗುತ್ತಿರುವುದೇನು? 2018ರ ಡಿಸೆಂಬರ್ 21ರಂದು ಕೇಂದ್ರ ಸರಕಾರದ ಉಪಹಣಕಾಸು ಮಂತ್ರಿಯಾದ ಶಿವಪ್ರತಾಪ್ ಶುಕ್ಲಾ ಅವರು ಸದನಕ್ಕೆ ನೀಡಿದ ಲಿಖಿತ ಹೇಳಿಕೆಯ ಪ್ರಕಾರವೇ 2017ರಲ್ಲಿ ಐದು ಬ್ಯಾಂಕುಗಳು ಎಸ್‌ಬಿಐನಲ್ಲಿ ವಿಲೀನಗೊಂಡ ಮೇಲೆ 6,950 ಶಾಖೆಗಳನ್ನು ಮುಚ್ಚಲಾಗಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳು ವಿಲೀನವಾದ ನಂತರದಲ್ಲಿ 800 ಶಾಖೆಗಳು ಮುಚ್ಚಿಕೊಂಡಿವೆ ಮತ್ತು 1991ರಿಂದಲೇ ಪ್ರಾರಂಭವಾದ ಸ್ವಯಂ ನಿವೃತ್ತಿ ಯೋಜನೆಯನ್ನು ಇನ್ನಷ್ಟು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದ್ದು ಹೆಚ್ಚೆಚ್ಚು ಉದ್ಯೋಗಿಗಳನ್ನು ಸ್ವಯಂ ಪ್ರೇರಿತವಾಗಿ ಮನೆಗೆ ಹೋಗುವಂತೆ ಮಾಡಲಾಗುತ್ತಿದೆ. ಹೀಗಾಗಿ ಬ್ಯಾಂಕುಗಳ ವಿಲೀನವೂ ಗ್ರಾಹಕರ ಮತ್ತು ಉದ್ಯೋಗಿಗಳ ಹಿತಾಸಕ್ತಿಗೂ ವಿರುದ್ಧವಾಗಿದೆ.

ಇದರ ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗೀಕರಣವನ್ನು ದೊಡ್ದ ಮಟ್ಟದಲ್ಲಿ ತರಲೆಂದೇ ಈ ವಿಲೀನ ಪ್ರಕ್ರಿಯೆಯ ವೇಗವನ್ನು ಹೆಚ್ಚು ಮಾಡಲಾಗುತ್ತಿದೆ. ಸಾಲವಿರುವ ಬ್ಯಾಂಕುಗಳನ್ನು ಯಾರೂ ಕೊಳ್ಳುವುದಿಲ್ಲ. ಆದ್ದರಿಂದ ಅವುಗಳ ಬ್ಯಾಲೆನ್ಸ್ ಶೀಟಿನಲ್ಲಿ ಕಡಿಮೆ ಸಾಲ ಅಥವಾ ಶೂನ್ಯ ಸಾಲ ತೋರಿಸಲು ಅನುವಾಗಲೆಂದೇ ಅವುಗಳನ್ನು ದೊಡ್ಡ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಗುತ್ತಿದೆ.

ಸರಕಾರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲವಾದರೂ ಸರಕಾರದ ಆರ್ಥಿಕ ಸಲಹೆಗಾರರೂ ಮತ್ತು ನೀತಿ ಆಯೋಗದ ಶಾಶ್ವತ ಸದಸ್ಯರೂ ಆಗಿರುವ ಬಿಬೇಕ್ ದೇಬ್ರಾಯ್ ಅವರು ಬ್ಯಾಂಕ್ ವಿಲೀನಕ್ಕೆ ಮುಂಚೆ ಸಂದರ್ಶನವೊಂದರಲ್ಲಿ ಬ್ಯಾಂಕ್ ವಿಲೀನದ ಹಿಂದಿನ ಈ ಉದ್ದೇಶವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. (ಆಸಕ್ತರು ಯೂಟ್ಯೂಬಿನಲ್ಲಿರುವ ಈ ಸಂದರ್ಶನವನ್ನು ನೋಡಬಹುದು. ಈ ಸಂದರ್ಶನದ 12ನೇ ನಿಮಿಷದಲ್ಲಿ ಅವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ: https://www.youtube.com/watch?v=QFxuC7M8EIE).

 ಅದರ ಜೊತೆಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸರಕಾರದ ಪಾಲನ್ನು ಕ್ರಮೇಣವಾಗಿ ಹಿಂದೆಗೆಯಲಾಗುತ್ತಿದೆ. ಮತ್ತೊಂದು ಕಡೆ ಸಾರ್ವಜನಿಕ ಬ್ಯಾಂಕುಗಳನ್ನು ಮತ್ತದರ ಶಾಖೆಗಳನ್ನು ಮುಚ್ಚುತ್ತಿರುವಾಗಲೇ ಹೆಚ್ಚೆಚ್ಚು ಖಾಸಗಿ ಬ್ಯಾಂಕುಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಒಟ್ಟಾರೆ ಸಾರಾಂಶದಲ್ಲಿ ಬ್ಯಾಂಕ್ ವಿಲೀನಗಳ ಮೂಲಕ ಕಾರ್ಪೊರೇಟ್ ಉದ್ಯಮಗಳ ನಷ್ಟವನ್ನು ರಾಷ್ಟ್ರೀಕರಿಸಲಾಗುತ್ತಿದೆ. ಆದರೆ ಬ್ಯಾಂಕು ಉದ್ಯಮಯ ಲಾಭಗಳನ್ನು ಮಾತ್ರ ಖಾಸಗೀಕರಿಸಲಾಗುತ್ತಿದೆ.

ಇದೇ ಬ್ಯಾಂಕ್ ವಿಲೀನದ ಅಸಲಿ ಚಹರೆ, ಉದ್ದೆೀಶ ಮತ್ತು ಯೋಜನೆ ಎಲ್ಲವೂ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News