ಯುವ ಪೀಳಿಗೆ ತಂಬಾಕು ತ್ಯಜಿಸಬೇಕು: ಡಾ.ಸಿ.ರಾಮಚಂದ್ರ

Update: 2019-09-07 12:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.7: ಇಂದಿನ ಯುವಪೀಳಿಗೆಯಲ್ಲಿ ತಂಬಾಕು ಸೇವನೆ ಅಧಿಕವಾಗುತ್ತಿದ್ದು, ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಿದ್ವಾಯಿ ಸ್ಮಾರಕ ಗ್ರಂಥಿಯ ನಿರ್ದೇಶಕ ಡಾ.ಸಿ.ರಾಮಚಂದ್ರ ಹೇಳಿದ್ದಾರೆ.

ಶನಿವಾರ ನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳೆಯರಲ್ಲಿ ಕ್ಯಾನ್ಸರ್ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಪೀಳಿಗೆಯು ತಂಬಾಕಿನಿಂದ ದೂರ ಉಳಿಯಬೇಕು. ತಂಬಾಕು ರಹಿತ ಸಮಾಜ ನಿರ್ಮಾಣ ಕಡೆಗೆ ಮುನ್ನುಗ್ಗಬೇಕು ಎಂದರು.

ಯುವಜನರಿಗೆ ಪ್ರತಿ ಕ್ಷಣವೂ ಅಮೂಲ್ಯವಾದುದಾಗಿದೆ. ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡುತ್ತಾ ಬದುಕಬೇಕಿದೆ. ಆದರೆ, ಇತ್ತೀಚಿಗೆ ಅತಿ ಸಣ್ಣ ವಯಸ್ಸಿನಲ್ಲಿಯೇ ತಂಬಾಕು ಉತ್ಪನ್ನಗಳಿಗೆ ಮಾರು ಹೋಗುತ್ತಿದ್ದಾರೆ. ಇದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಅವರು ತಿಳಿಸಿದರು.

ದೇಶದ ಅತ್ಯಂತ ಶ್ರೀಮಂತರಾದ ರತನ್ ಟಾಟಾ, ಮುಖೇಶ್ ಅಂಬಾನಿ ಸೇರಿದಂತೆ ಹಲವರು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ, ಮಕ್ಕಳೇ ನಮ್ಮ ಆಸ್ತಿ, ಅವರಿಗಾಗಿ ಆಸ್ತಿ ಮಾಡುವುದರ ಬದಲಿಗೆ, ಅವರನ್ನು ಉತ್ತಮ ಮನುಷ್ಯರನ್ನಾಗಿ ಮಾಡಿ ಎನ್ನುತ್ತಿದ್ದಾರೆ. ಹೀಗಾಗಿ, ಸಮಾಜವನ್ನು ತಂಬಾಕು ಮುಕ್ತವನ್ನಾಗಿ ಮಾಡಲು ಮುಂದಾಗೋಣ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನಾವು ಸೇವನೆ ಮಾಡುತ್ತಿರುವ ಆಹಾರಗಳು ನಮ್ಮ ಆರೋಗ್ಯದ ಮೇಲೆ ತೀವ್ರತರವಾದ ಪರಿಣಾಮ ಬೀರುತ್ತಿವೆ. ಪೆಪ್ಸಿ, ಕೋಕಾಕೋಲಾ ಹಾಗೂ ಮತ್ತಿತರೆ ತಂಪು ಪಾನೀಯಗಳು ಹಾಗೂ ಪಾಶ್ಚಿಮಾತ್ಯ ಆಹಾರ ಪದಾರ್ಥಗಳಿಂದಲೂ ಕ್ಯಾನ್ಸರ್‌ಗೆ ಕಾರಣವಾಗುವ ಸಂಭವವಿದೆ ಎಂದು ರಾಮಚಂದ್ರ ತಿಳಿಸಿದರು.

ಈ ಎಲ್ಲ ಹಿನ್ನೆಲೆಯಲ್ಲಿ ನಾವು ನಮ್ಮ ಆರೋಗ್ಯದ ದೃಷ್ಟಿಯಿಂದ ತಂಬಾಕು ಮುಕ್ತರಾಗಬೇಕು. ಅದರಲ್ಲಿಯೂ ಯುವಜನತೆ ಸಿಗರೇಟ್, ಗುಟ್ಕಾದಿಂದ ದೂರ ಉಳಿಯಬೇಕು. ಜತೆಗೆ, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ಅವರು ಸಲಹೆ ನೀಡಿದರು.

ಕ್ಯಾನ್ಸರ್ ತಜ್ಞೆ ಡಾ.ವಿ.ಆರ್.ಪಲ್ಲವಿ ಮಾತನಾಡಿ, ಶೇ.90-95 ರಷ್ಟು ಕ್ಯಾನ್ಸರ್‌ಗಳು ಸ್ವಾಭಾವಿಕವಾಗಿ ನಮ್ಮ ಜೀವನಶೈಲಿಯಿಂದ ಉಂಟಾಗುತ್ತವೆ. ಅದರಲ್ಲಿ ಧೂಮಪಾನ, ಮದ್ಯಪಾನ, ಮಾನಸಿಕ ಒತ್ತಡ, ಸ್ಥಾವರತೆ, ವಿಕಿರಣಗಳು, ಬೊಜ್ಜು ಮತ್ತು ಮಾಲಿನ್ಯಗಳು ಕಾರಣ. ಉಳಿದ ಶೇ.5-10 ರಷ್ಟು ಜೀವಕೋಶಗಳೊಳಗಿನ ಕ್ರೋಮೋಸೋಮುಗಳ ವ್ಯತ್ಯಾಸದಿಂದ ಅನುವಂಶಿಕವಾಗಿ ಉಂಟಾಗುತ್ತವೆ ಎಂದು ಹೇಳಿದರು.

ಕ್ಯಾನ್ಸರ್‌ನಲ್ಲಿ ಅತಿ ಹೆಚ್ಚು ಜನರು ಕರುಳಿನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಪುರುಷರಲ್ಲಿ ಕಾಣಿಸಿಕೊಳ್ಳುವ ಮೂರನೆ ಹಾಗೂ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಎರಡನೆ ವಿಧದ ಕ್ಯಾನ್ಸರ್ ಕರುಳಿನ ಕ್ಯಾನ್ಸರ್ ಆಗಿದೆ. ಕರುಳಿನ ಕ್ಯಾನ್ಸರ್‌ನ ಅರ್ಧದಷ್ಟು ಸಾವುಗಳು ಭೌಗೋಳಿಕತೆ ಮತ್ತು ಶಿಕ್ಷಣದ ಅಸಾಮಾನ್ಯತೆಯಿಂದ ಕೂಡಿವೆ ಎಂದು ಸಂಶೋಧನೆಗಳು ಹೇಳುತ್ತಿವೆ ಎಂದು ತಿಳಿಸಿದರು.

ಗರ್ಭಕೋಶದ ಒಳಪದರಿನಲ್ಲಿ ಕಂಡುಬರುವ ಕ್ಯಾನ್ಸರ್ ಅನ್ನು ಎಂಡೋಮೆಟ್ರಿಯ ಕ್ಯಾನ್ಸರ್ ಎಂದು ಹೇಳಲಾಗುತ್ತದೆ. ಸಂತಾನೋತ್ಪತ್ತಿ ಅಂಗಕ್ಕೆ ಉಂಟಾಗುವ ಕ್ಯಾನ್ಸರ್‌ಗಳಲ್ಲಿ ಇದು 3ನೇ ಮುಖ್ಯದ್ದಾಗಿದೆ. ಮುಟ್ಟು ನಿಂತವರಲ್ಲಿಯೇ ಸಾಮಾನ್ಯವಾಗಿ ಇದು ಕಾಣಿಸಿಕೊಳ್ಳುತ್ತದೆ. ಕುಟುಂಬದಲ್ಲಿ ಮಧ್ಯವಯಸ್ಸಿನ ಮಹಿಳೆಯರಲ್ಲೂ ಇದು ಗೋಚರಿಸಬಹುದು. ಈಸ್ಟ್ರೋಜನ್ ಹಾರ್ಮೋನಿನ ಪ್ರಮಾಣ ಜಾಸ್ತಿ ಇದ್ದು, ಪ್ರೊಜೆಸ್ಟ್ರಾನ್ ಪ್ರಮಾಣ ಕಡಿಮೆ ಇರುತ್ತೊ ಅಂಥವರಲ್ಲಿ ಇದು ಕಂಡುಬರುತ್ತದೆ ಎಂದರು.

ಆದುದರಿಂದಾಗಿ ಮಹಿಳೆಯರು ಕಾಲಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕಾಗಿರುವುದು ಸೂಕ್ತ. ಈ ಮೂಲಕ ಕ್ಯಾನ್ಸರ್ ಮುಕ್ತ ಜೀವನ ನಡೆಸಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News