ಒಪ್ಪಂದರಹಿತ ಬ್ರೆಕ್ಸಿಟ್ ನಿಲ್ಲಿಸುವ ಮಸೂದೆಗೆ ಬ್ರಿಟನ್ ಸಂಸತ್ತು ಅಂಗೀಕಾರ

Update: 2019-09-07 18:08 GMT

ಲಂಡನ್, ಸೆ. 7: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದನ್ನು (ಬ್ರೆಕ್ಸಿಟ್) ವಿಳಂಬಿಸುವಂತೆ ಪ್ರಧಾನಿ ಬೊರಿಸ್ ಜಾನ್ಸನ್‌ರನ್ನು ಬಲವಂತಪಡಿಸುವ ಕಾನೂನಿಗೆ ಬ್ರಿಟನ್‌ನ ಮೇಲ್ಮನೆ ಶುಕ್ರವಾರ ಅಂತಿಮ ಅಂಗೀಕಾರ ನೀಡಿದೆ. ಇದು ಅವಧಿಪೂರ್ವ ಚುನಾವಣೆ ನಡೆಯುವಂತೆ ನೋಡಿಕೊಳ್ಳುವಲ್ಲಿ ಪರದಾಡುತ್ತಿರುವ ಪ್ರಧಾನಿಗೆ ಮತ್ತೊಂದು ಹೊಸ ಹಿನ್ನಡೆಯಾಗಿದೆ.

ಮುಂದಿನ ತಿಂಗಳು ಐರೋಪ್ಯ ಒಕ್ಕೂಟದಿಂದ ವಿಚ್ಛೇದನಗೊಳ್ಳುವ ಮುನ್ನ ಅದರೊಂದಿಗೆ ಒಪ್ಪಂದವೊಂದಕ್ಕೆ ಬರಲು ಜಾನ್ಸನ್ ವಿಫಲರಾದರೆ, ಈಗಿನ ಅಕ್ಟೋಬರ್ 31ರ ಬ್ರೆಕ್ಸಿಟ್ ಗಡುವನ್ನು ಮುಂದೂಡುವಂತೆ ಈ ಮಸೂದೆ ನಿಗದಿಪಡಿಸುತ್ತದೆ.

ಈ ಮಸೂದೆಗೆ ರಾಣಿ ದ್ವಿತೀಯ ಎಲಿಝಬೆತ್ ಸಹಿ ಹಾಕಿದ ಬಳಿಕ ಅದು ಕಾನೂನಾಗುತ್ತದೆ.

ಬ್ರೆಕ್ಸಿಟನ್ನು ಮುಂದೂಡುವುದಕ್ಕಿಂತಲೂ ನಾನು ಸಾಯತ್ತೇನೆ ಎಂದು ಈಗಾಗಲೇ ಹೇಳಿರುವ ಜಾನ್ಸನ್ ಬ್ರಿಟನ್ ಸಂಸತ್ತಿಗೆ ಅವಧಿಪೂರ್ವ ಚುನಾವಣೆಯನ್ನು ನಡೆಸಲು ಉತ್ಸುಕರಾಗಿದ್ದಾರೆ. ಈ ಚುನಾವಣೆಯು ತನಗೆ ಒಪ್ಪಂದವಿದ್ದರೂ ಒಪ್ಪಂದವಿಲ್ಲದೆಯೂ ಬ್ರಿಟನನ್ನು ಐರೋಪ್ಯ ಒಕ್ಕೂಟದಿಂದ ಹೊರತರಲು ಜನಾದೇಶ ನೀಡುತ್ತದೆ ಎಂದು ಅವರು ನಂಬಿದ್ದಾರೆ.

ಅವರು ಶುಕ್ರವಾರ ಬೆಳಗ್ಗೆ ಸ್ಕಾಟ್‌ಲ್ಯಾಂಡ್‌ನಲ್ಲಿ ಮೀನುಗಾರರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಇಲ್ಲಿನ ಮೀನುಗಾರರು 2016ರ ಬ್ರೆಕ್ಸಿಟ್ ಜನಮತಗಣನೆಯಲ್ಲಿ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರುವ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದರು.

 ಬ್ರಿಟನ್ ಸಂಸತ್ ಅಂಗೀಕರಿಸಿದ ಮಸೂದೆಯನ್ನು ಜಾನ್ಸನ್ ‘ಶರಣಾಗತಿ’ ಎಂದು ಬಣ್ಣಿಸಿದ್ದಾರೆ. ಇದು ಬ್ರೆಕ್ಸಿಟ್ ಒಪ್ಪಂದದಲ್ಲಿ ತಮಗೆ ಬೇಕಾದ ಶರತ್ತುಗಳನ್ನು ವಿಧಿಸಲು ಉಳಿದ 27 ಐರೋಪ್ಯ ಒಕ್ಕೂಟದ ನಾಯಕರಿಗೆ ಅವಕಾಶ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

46 ವರ್ಷಗಳ ಕಾಲ ಐರೋಪ್ಯ ಒಕ್ಕೂಟದಲ್ಲಿದ್ದ ಬಳಿಕ, ಇದೀಗ ಬ್ರಿಟನ್ ಹೊರಬರುತ್ತಿದೆ.

ಇದಕ್ಕೂ ಮೊದಲು, ಮಂಗಳವಾರ ಬ್ರೆಕ್ಸಿಟ್ ಗಡುವನ್ನು ಮುಂದೂಡುವ ಮಸೂದೆಯನ್ನು ಹೌಸ್ ಆಫ್ ಕಾಮನ್ಸ್ ಅಂಗೀಕರಿಸಿತ್ತು. ಅಂದು ಪ್ರಧಾನಿ ಜಾನ್ಸನ್‌ರ ಕನ್ಸರ್ವೇಟಿವ್ ಪಕ್ಷದವರೇ ಆಗಿರುವ 21 ಬಂಡುಕೋರ ಸಂಸದರು ಮಸೂದೆ ಪರವಾಗಿ ಮತ ಹಾಕಿದ್ದರು.

ಆ ಬಂಡುಕೋರ ಸಂಸದರನ್ನು ಜಾನ್ಸನ್ ಉಚ್ಚಾಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News