ಈ ಬುಡಕಟ್ಟು ಯುವತಿಯ ಸಾಧನೆ ಏನು ಗೊತ್ತೇ ?

Update: 2019-09-09 04:53 GMT

ಭುವನೇಶ್ವರ: ಒಡಿಶಾದ ನಕ್ಸಲ್‌ ಪೀಡಿತ ಮಲ್ಕನಗಿರಿ ಜಿಲ್ಲೆಯ 27 ವರ್ಷ ವಯಸ್ಸಿನ ಬುಡಕಟ್ಟು ಜನಾಂಗದ ಯುವತಿ, ಬುಡಕಟ್ಟು ಜನಾಂಗದ ಹಿನ್ನೆಲೆಯ ವಾಣಿಜ್ಯ ವಿಮಾನ ಚಾಲನೆ ಮಾಡುವ ಮೊಟ್ಟಮೊದಲ ಮಹಿಳಾ ಪೈಲಟ್ ಎನಿಸಿಕೊಂಡಿದ್ದಾರೆ.

ಮಲ್ಕನಗಿರಿ ಜಿಲ್ಲೆಯ ಪೊಲೀಸ್ ಪೇದೆಯ ಮಗಳು ಅನುಪ್ರಿಯಾ ಮಧುಮಿತಾ ಲಾಕ್ರಾ ಇದೀಗ ತಮ್ಮ ಜೀವಮಾನದ ಆಕಾಂಕ್ಷೆಯನ್ನು ಈಡೇರಿಸಿಕೊಂಡಿದ್ದು, ಇಂಡಿಗೊ ಏರ್‌ಲೈನ್ಸ್‌ನ ಸಹಪೈಲಟ್ ಆಗಿ ನೇಮಕಗೊಂಡಿದ್ದಾರೆ.

ಅನುಪ್ರಿಯಾ ತಂದೆ ಮರಿನಿಯಾಸ್ ಲಾಕ್ರಾ ಮಲ್ಕನಗಿರಿಯಲ್ಲಿ ಪೊಲೀಸ್ ಪೇದೆ. "ಮಗಳು ನಮ್ಮ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾಳೆ" ಎಂದು ತಾಯಿ ಜಿಮಜ್ ಯಶ್ಮಿನ್ ಲಾಕ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

"ಆಕೆಯ ಪೈಲಟಿಂಗ್ ತರಬೇತಿಗೆ ಹಣ ಹೊಂದಿಸುವುದು ಕಷ್ಟವಾದರೂ, ಸಾಲ ಪಡೆದು, ಸಂಬಂಧಿಕರಿಂದ ನೆರವು ಪಡೆದು ತರಬೇತಿ ಕೊಡಿಸಿದೆ. ಆಕೆ ಇಷ್ಟಪಟ್ಟ ಕ್ಷೇತ್ರದಲ್ಲಿ ಶಿಕ್ಷಣ ಕೊಡಿಸಬೇಕು ಎನ್ನುವ ಬಯಕೆ ನನ್ನದಾಗಿತ್ತು" ಎಂದು ಮರಿನಿಯಾಸ್ ಲಾಕ್ರಾ ಹೇಳಿದ್ದಾರೆ.

"ಸಣ್ಣ ಆದಾಯ ಇದ್ದರೂ, ಮಗಳು ದೊಡ್ಡ ಕನಸು ಕಾಣುವುದಕ್ಕೆ ನಾವೆಂದೂ ತಡೆ ಒಡ್ಡಿರಲಿಲ್ಲ. ಈಕೆ ಎಲ್ಲ ಇಂಥ ಹುಡುಗರಿಯರಿಗೆ ಸ್ಫೂರ್ತಿಯಾಗಬೇಕು ಎನ್ನುವುದು ನಮ್ಮ ಇಚ್ಛೆ. ತಮ್ಮ ಹೆಣ್ಣುಮಕ್ಕಳಿಗೆ ಎಲ್ಲ ಪೋಷಕರೂ ನೆರವು ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಟ್ವೀಟ್ ಮೂಲಕ ಈ ಯುವತಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ. "ಆಕೆಯ ಸಾಧನೆ ಬಗ್ಗೆ ಅಪಾರ ಸಂತಸವಿದೆ. ಹಲವು ಹುಡುಗಿಯರಿಗೆ ಆಕೆ ಮಾದರಿ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News