ಬೆಂಗಳೂರಿನ ಪೊಲೀಸ್ ಆಯುಕ್ತರಾದ ಐವರು ಪುಟಾಣಿಗಳು!

Update: 2019-09-09 11:51 GMT

ಬೆಂಗಳೂರು, ಸೆ.9: ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಐವರು ಮಕ್ಕಳು ಖಾಕಿ ಸಮವಸ್ತ್ರ ಧರಿಸಿ ಒಂದು ದಿನದ ಮಟ್ಟಿಗೆ ಬೆಂಗಳೂರಿನ ಪೊಲೀಸ್ ಮುಖ್ಯಸ್ಥರಾಗಿ ಸಂಭ್ರಮಿಸಿದ ಅಪರೂಪದ ಕ್ಷಣಕ್ಕೆ ಇಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಾಕ್ಷಿಯಾಯಿತು. ನಗರ ಪೊಲೀಸ್ ಹಾಗೂ ಮೇಕ್ ಎ ವಿಶ್ ಫೌಂಡೇಶನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆದಿದೆ.

ರುತನ್ ಕುಮಾರ್, ಮುಹಮ್ಮದ್ ಸಾಹಿಬ್, ಸೈಯದ್ ಇಮಾದ್, ಶ್ರಾವಣಿ ಹಾಗೂ ಅರ್ಫತ್ ಪಾಷಾ ಎಂಬ ಐದು ಮಕ್ಕಳಿಗೆ ಪೊಲೀಸ್ ಹಾಗೂ ಶ್ವಾನ ತಂಡದಿಂದ ಸಾಂಪ್ರದಾಯಿಕ ಗೌರವ ರಕ್ಷೆಯೂ ದೊರಕಿದೆ. ನಂತರ ಅವರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.

ಐದು ಮಂದಿ ಮಕ್ಕಳೂ ಆ ಕ್ಷಣವನ್ನು ಸಂಭ್ರಮಿಸಿದ ಪರಿಯನ್ನು ನೋಡಿ ಅಲ್ಲಿದ್ದ ಎಲ್ಲರೂ ಖುಷಿ ಪಟ್ಟರು. ಅವರ ಕೈಗಳಿಗೆ ಪೊಲೀಸ್ ಗನ್ ಹಾಗೂ ಕೈಕೋಳಗಳನ್ನೂ ನೀಡಿದಾಗ ಅವರ ಸಂತೋಷ ಇಮ್ಮಡಿಯಾಗಿತ್ತು.

ಪೊಲೀಸ್ ಕಮಿಷನರ್ ಆಗಿ ಏನು ಮಾಡುತ್ತೀರಾ ಎಂದು ಒಬ್ಬರು ಪ್ರಶ್ನಿಸಿದಾಗ “ಕೆಟ್ಟ ಜನರನ್ನು ಜೈಲಿಗಟ್ಟುತ್ತೇನೆ'' ಎಂದು ಒಬ್ಬ ಬಾಲಕ ಉತ್ತರಿಸಿದ್ದ. ಈ ವಿಶಿಷ್ಟ ಕಾಯಕ್ರಮದ ಬಗ್ಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ “ಮೇಕ್ ಎ ವಿಶ್ ಫೌಂಡೇಶನ್ ಪ್ರತಿನಿಧಿಗಳು  ಒಂದೆರಡು ದಿನಗಳ ಹಿಂದೆ ತಮ್ಮನ್ನು ಭೇಟಿಯಾಗಿ ಈ ಮಕ್ಕಳಿಗೆ ಪೊಲೀಸ್ ಠಾಣೆಗೆ ಭೇಟಿಯಾಗಬೇಕೆಂಬ ಇಚ್ಛೆಯಿದೆ ಎಂದು ತಿಳಿಸಿದ್ದರು'' ಎಂದು ಹೇಳಿದರು.

``ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಪುಟ್ಟ ಮಕ್ಕಳಿಗಾಗಿ ಫೌಂಡೇಶನ್ ಕೆಲಸ ಮಾಡುತ್ತಿದೆ. ಈ ಮಕ್ಕಳಿಗೆ ಪೊಲೀಸ್ ಆಫೀಸರ್ ಆಗಬೇಕೆಂಬ ಆಸೆಯಿತ್ತು, ಇಂದು ಅವರ ಆಸೆಯನ್ನು ನೆರವೇರಿಸಿದ ಖುಷಿಯಿದೆ'' ಎಂದು ಫೌಂಡೇಶನ್‍ನ  ಗಂಗಾಧರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News