ಸರಕಾರಿ ವೈದ್ಯರು ಕರ್ತವ್ಯದ ವೇಳೆ ಖಾಸಗಿ ಕ್ಲಿನಿಕ್ ನಡೆಸಿದರೆ ಅಮಾನತು: ಸಚಿವ ಶ್ರೀರಾಮುಲು

Update: 2019-09-09 12:23 GMT

ಬೆಂಗಳೂರು, ಸೆ.9: ಕರ್ತವ್ಯದ ಸಂದರ್ಭದಲ್ಲಿ ಸರಕಾರಿ ವೈದ್ಯರು ಖಾಸಗಿ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ನೀಡುವ ಪ್ರಕರಣಗಳು ಕಂಡುಬಂದರೆ ಅವರನ್ನು ತಕ್ಷಣದಿಂದಲೇ ಅಮಾನತು ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. 

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾದವರು, ಕರ್ತವ್ಯದ ವೇಳೆಯಲ್ಲಿಯೇ ತಮ್ಮ ಖಾಸಗಿ ಕ್ಲಿನಿಕ್ ಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಅವರನ್ನು ಕೂಡಲೆ ವಜಾಗೊಳಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದರು. ರಾಜ್ಯ ಸರಕಾರ ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೂ, ಕೆಲವರು ಖಾಸಗಿ ಕ್ಲಿನಿಕ್ ನಡೆಸುತ್ತಿರುವುದು ಸಲ್ಲ. ಇದನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡಲ್ಲ. ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತುಕತೆಯನ್ನೂ ನಡೆಸಿದ್ದೇವೆ ಎಂದು ತಿಳಿಸಿದರು.

ಸರಕಾರಿ ಆಸ್ಪತ್ರೆಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಹಲವಾರು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆಗಳು ಸರಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು. ಇದಕ್ಕಾಗಿ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳ ಸುಧಾರಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಆಸ್ಪತ್ರೆಯಲ್ಲಿಯೇ ವಾಸ್ತವ್ಯ: ಸರಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳ ಮನಸ್ಥಿತಿ, ಅವರಿಗೆ ಸಿಗುವ ಸೌಲಭ್ಯಗಳು ಸೇರಿದಂತೆ ಅಲ್ಲಿನ ಕುಂದು-ಕೊರೆತೆಗಳನ್ನು ಆಲಿಸಲು ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿಯೇ ವಾಸ್ತವ್ಯ ಹೂಡಲಿದ್ದೇನೆ. ಇದರಿಂದ ನೈಜ ಪರಿಸ್ಥಿತಿಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಭ್ರಷ್ಟರು ಸಚಿವರಾಗಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಶ್ರೀರಾಮುಲು, ಕಾಮಾಲೆ ಕಣ್ಣು ಇದ್ದವರಿಗೆ ಜಗತ್ತೆಲ್ಲಾ ಹಳದಿ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಪಕ್ಷದ ಶಾಸಕರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅಂತಹವರು ಬೇರೆಯವರ ಬಗ್ಗೆ ಉಪದೇಶ ಮಾಡುವ ಅಗತ್ಯವಾದರು ಏನು. ಕುಮಾರಸ್ವಾಮಿ ಮೊದಲು ತಮ್ಮ ಬೆನ್ನು ನೋಡಿಕೊಳ್ಳಲಿ. ಕುಮಾರಸ್ವಾಮಿಗೆ ಇನ್ನೊಬ್ಬರನ್ನು ಭ್ರಷ್ಟರು ಎನ್ನಲು ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.

ಆಯುಷ್ಮಾನ್-ಆರೋಗ್ಯಭಾಗ್ಯ ವಿಲೀನವಿಲ್ಲ

ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಕಲ್ಪಿಸುವ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯ ಸರಕಾರದ ಆರೋಗ್ಯ ಭಾಗ್ಯ ಯೋಜನೆಯನ್ನು ವಿಲೀನ ಮಾಡುವ, ಇಲ್ಲವೇ ಬದಲಾವಣೆ ಮಾಡುವ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕೇಂದ್ರ ಹಾಗೂ ರಾಜ್ಯ ಎರಡೂ ಯೋಜನೆಗಳಲ್ಲಿ ಸಾಕಷ್ಟು ಗೊಂದಲಗಳು ಇರುವ ಕಾರಣ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಆರೋಗ್ಯ ಭಾಗ್ಯ ಯೋಜನೆಯ ಜತೆ ವಿಲೀನ ಮಾಡುವಂತೆ ಪ್ರಸ್ತಾವನೆ ಬಂದಿತ್ತು. ಈ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಆದರೆ, ಎಲ್ಲಿಯೂ ಬಡವರಿಗೆ ತೊಂದರೆಯಾಗದಂತೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News