ದ್ವೇಷ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಅಪಾಯ: ಎಸ್‌ಡಿಪಿಐ

Update: 2019-09-09 12:38 GMT

ಬೆಂಗಳೂರು, ಸೆ.9: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ವಿಮರ್ಶಿಸಿದ, ಜನವಿರೋಧಿ ನೀತಿಗಳನ್ನು ಪ್ರತಿಭಟಿಸಿದ ಹಾಗೂ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವವರನ್ನು ಸುಳ್ಳು ಕೇಸುಗಳಿಗೆ ಸಿಲುಕಿಸಿ ಜೈಲಿಗೆ ತಳ್ಳುವ ಕೃತ್ಯಗಳನ್ನು ನಿರಂತರವಾಗಿ ನಡೆಸುತ್ತಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದೆ. 

ನಗರದಲ್ಲಿರುವ ಎಸ್‌ಡಿಪಿಐ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಮಾಜಿಕ, ಆರ್ಥಿಕ, ರಾಜಕೀಯ ವಿದ್ಯಾಮಾನಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರಾಜಕೀಯ ಪಕ್ಷಗಳ ನಾಯಕರನ್ನು ಸೇಡಿನ ಕ್ರಮಗಳಿಗೆ ಒಳಗಾಗಿಸುತ್ತಿದೆ. ದ್ವೇಷ, ಹಗೆತನ, ಸೇಡು, ಕುತಂತ್ರಗಳಿಂದ ದೇಶವನ್ನು ನಡೆಸುವುದು ಸಾಧ್ಯವಿಲ್ಲ. ಇದು ಜನರಲ್ಲಿ ಅಭದ್ರತೆ ಹಾಗೂ ರೋಷ ಮನೋಭಾವನೆಯನ್ನು ಹುಟ್ಟು ಹಾಕುತ್ತದೆ. ದೇಶದ ಜೈಲುಗಳಲ್ಲಿ ಈ ರೀತಿ ಬಂಧಿಗಳಾಗಿರುವ ಸಾವಿರಾರು ಜನರನ್ನು ಬಿಡುಗಡೆಗೊಳಿಸಬೇಕು ಹಾಗೂ ಸರಕಾರಗಳು ಇಂತಹ ಸೇಡಿನ ರಾಜಕಾರಣವನ್ನು ನಿಲ್ಲಿಸಬೇಕೆಂದು ರಾಜ್ಯ ಸಮಿತಿ ಎಚ್ಚರಿಸಿದೆ.

ರಾಜ್ಯದ 18 ಜಿಲ್ಲೆಗಳಲ್ಲಿ ಬಂದ ಭೀಕರ ಪ್ರವಾಹದಿಂದ ಸಾವಿರಾರು ಮಂದಿ ಮನೆ, ಪರಿಕರಗಳು, ಸೊತ್ತು, ಕೃಷಿಗಳನ್ನು ಕಳೆದುಕೊಂಡು ಅತ್ಯಂತ ದಯನೀಯ ಸ್ಥಿತಿಯನ್ನೆದುರಿಸಿದಾಗ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿಲ್ಲ. ಸುಮಾರು 50 ಸಾವಿರ ಕೋಟಿ ರೂ.ನಷ್ಟವನ್ನೆದುರಿಸಿದ ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ಪರಿಹಾರ ದೊರಕಲಿಲ್ಲ ಎಂದು ಎಸ್‌ಡಿಪಿಐ ಆರೋಪಿಸಿದೆ.

ದೇಶದ ಆರ್ಥಿಕ ಸ್ಥಿತಿ ದಯನೀಯವಾಗಿ ಕುಸಿಯಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ತಪ್ಪುಆರ್ಥಿಕ ನೀತಿಯೇ ಕಾರಣ. ಬೃಹತ್ ಉದ್ಯಮಗಳಲ್ಲದೆ ಸಣ್ಣ ಉದ್ಯಮಗಳಿಗೂ ಆರ್ಥಿಕ ಕುಸಿತದ ಕೆಟ್ಟ ಪರಿಣಾಮಗಳು ತಟ್ಟಿದ್ದು ವಾಹನೋದ್ಯಮ, ಜವಳಿ, ಗ್ರಾಹಕೋತ್ಪನ್ನ ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳು ನೆಲ ಕಚ್ಚುವಂತಾಗಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ. ಕೋಟ್ಯಂತರ ಜನರು ನಿರುದ್ಯೋಗಿಗಳಾಗಿದ್ದು, ಭಾರತದ ಜಿಡಿಪಿ ಐತಿಹಾಸಿಕ ಕನಿಷ್ಠಕ್ಕೆ ಕುಸಿದಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲೂ ಹಲವು ತಿಂಗಳಿನಿಂದ ವೇತನ ಪಾವತಿಯಾಗದಿರುವುದು ಆರ್ಥಿಕತೆಯ ಕರಾಳತೆಯನ್ನು ಸೂಚಿಸುತ್ತದೆ. ಬ್ಯಾಂಕುಗಳ ವಿಲೀನ, ಸಾಲ ಮರು ಪಾವತಿಯಾಗದಿರುವುದು, ರಿಸರ್ವ್ ಬ್ಯಾಂಕಿನಿಂದ ಮೀಸಲು ನಿಧಿ ಎತ್ತಿರುವುದು ಆರ್ಥಿಕತೆಯ ಪತನದ ಸಂಕೇತವಾಗಿದೆ. ದೇಶದ ಈ ಹೀನಾಯ ಸ್ಥಿತಿಗೆ ಕೇಂದ್ರದ ಬಿಜೆಪಿ ಸರಕಾರದ ಹಠಮಾರಿತನ ಹಾಗೂ ಸರ್ವಾಧಿಕಾರಿ ನೀತಿಯೇ ಕಾರಣ ಎಂದು ರಾಜ್ಯ ಸಮಿತಿ ಅಭಿಪ್ರಾಯಿಸಿದೆ.

ಬಡವರ ಸೌಲಭ್ಯಕ್ಕಾಗಿ ಹಿಂದಿನ ಸರಕಾರಗಳು ಒದಗಿಸಿದ ಇಂದಿರಾ ಕ್ಯಾಂಟೀನ್‌ಗಳಿಗೆ ಹಣಕಾಸು ಒದಗಿಸುವುದಕ್ಕೆ ಸರಕಾರ ವಿಘ್ನವನ್ನುಂಟುಮಾಡುತ್ತಿದೆ ಎಂದು ಎಸ್‌ಡಿಪಿಐ ದೂರಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಬಿಡುಗಡೆಗೊಳಿಸದೆ ಕಿರುಕುಳ ನೀಡುತ್ತಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ.

ಬಿಬಿಎಂಪಿಯಲ್ಲಿ ಬಿಜೆಪಿಯೇತರ ಕಾರ್ಪೊರೇಟರ್ ವಾರ್ಡುಗಳಿಗೆ ಈ ಹಿಂದೆಯೇ ನಿಗದಿಗೊಳಿಸಲ್ಪಟ್ಟ ಬಜೆಟ್‌ನಲ್ಲಿ ಭಾರೀ ಕಡಿತಗೊಳಿಸಿ ಬಿಜೆಪಿ ಕಾರ್ಪೋರೇಟರ್ ವಾರ್ಡುಗಳಿಗೆ ಬಜೆಟ್ ನೀಡುತ್ತಿದೆ. ಇಂತಹ ಸೇಡಿನ ಹಾಗೂ ಕುತ್ಸಿತ ರಾಜಕೀಯ ಮಾಡುತ್ತಿರುವ ಯಡಿಯೂರಪ್ಪ ಸರಕಾರ ತಕ್ಷಣವೇ ಸರಿದಾರಿಗೆ ಬರದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದೆಂದು ಎಸ್‌ಡಿಪಿಐ ಎಚ್ಚರಿಸಿದೆ.

ಯಡಿಯೂರಪ್ಪ ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಇದು ನಿರ್ದಿಷ್ಟ ಧರ್ಮದ ಮತಗಳನ್ನು ಸೆಳೆಯುವ ಕುತ್ಸಿತ ರಾಜಕಾರಣವಲ್ಲದೆ ಮತ್ತೇನೂ ಅಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಶೋಚನೀಯ ವೈಫಲ್ಯಗಳನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದರಲ್ಲಿ ಬಿಜೆಪಿ ನಿಸ್ಸೀಮವಾಗಿದೆ. ವಿದೇಶಗಳಿಗೆ ಬೀಫ್ ರಫ್ತು ಮಾಡುವಲ್ಲಿ ಬಿಜೆಪಿಯವರೇ ಮುಂದು ಎನ್ನುವುದನ್ನು ದೇಶದ ಜನರು ಅರಿತಿದ್ದಾರೆ. ಬಿಜೆಪಿಯ ಗೋ ರಾಜಕಾರಣ ಅಪಾಯಕಾರಿ ಯಾಗಿದ್ದು ರಾಜ್ಯದ ಜನತೆ ಸರಕಾರಕ್ಕೆ ತಕ್ಕ ಎಚ್ಚರಿಕೆಯ ಸಂದೇಶವನ್ನು ನೀಡಬೇಕೆಂದು ಎಸ್‌ಡಿಪಿಐ ಕರೆ ನೀಡಿದೆ.

ಸಭೆಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಉಸ್ತುವಾರಿ ಅಡ್ವಕೇಟ್ ಅಶ್ರಫ್, ರಾಷ್ಟ್ರೀಯ ನಾಯಕರಾದ ಪ್ರೋ.ನಾಝ್ನೀನ್ ಬೇಗಂ, ಅಲ್ಫಾನ್ಸೋ ಫ್ರಾಂಕೋ, ಡಾ. ಮೆಹಬೂಬ್ ಷರೀಫ್ ಅವಾದ್, ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ನ್ಯಾಯವಾದಿ ಅಬ್ದುಲ್ ಮಜೀದ್ ಖಾನ್, ಪ್ರಧಾನ ಕಾರ್ಯದರ್ಶಿಗಳಾದ ರಿಯಾಝ್ ಫರಂಗಿಪೇಟೆ, ಅಬ್ದುಲ್ ಹನ್ನಾನ್, ಕಾರ್ಯದರ್ಶಿಗಳಾದ ಅಕ್ರಮ್ ಹಸನ್, ಅಫ್ಸರ್ ಕೆ., ಕುಮಾರಸ್ವಾಮಿ, ಅಶ್ರಫ್ ಮಾಚಾರ್, ಕೋಶಾಧಿಕಾರಿ ಜಾವೀದ್ ಆಝಾಂ ಹಾಗೂ ರಾಜ್ಯ ಸಮಿತಿ ಸದಸ್ಯರು ಮತ್ತು ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News