ಕಾಶ್ಮೀರದ ಇನ್ನಷ್ಟು ಪ್ರದೇಶಗಳಲ್ಲಿ ನಿರ್ಬಂಧ ತೆರವು

Update: 2019-09-09 13:49 GMT

ಶ್ರೀನಗರ, ಸೆ.9: ಶ್ರೀನಗರದ ಕೆಲವು ಭಾಗಗಳನ್ನು ಹೊರತುಪಡಿಸಿ ಕಾಶ್ಮೀರದ ಬಹುತೇಕ ಪ್ರದೇಶಗಳಲ್ಲಿ ನಿರ್ಬಂಧ ತೆರವುಗೊಳಿಸಲಾಗಿದೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭದ್ರತಾ ಪಡೆಗಳ ಉಪಸ್ಥಿತಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಣಿವೆ ರಾಜ್ಯದ ಹೆಚ್ಚಿನೆಡೆ ಭದ್ರತಾ ಪಡೆಗಳು ಹಾಕಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿದೆ. ಆದರೆ ಶಾಲೆ-ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಅಲ್ಲದೆ ಸರಕಾರಿ ಬಸ್ಸುಗಳೂ ರಸ್ತೆಗೆ ಇಳಿದಿಲ್ಲ. ಶ್ರೀನಗರದ ಒಳಪ್ರದೇಶಗಳು ಹಾಗೂ ಮೈಸುಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿರ್ಬಂಧ ಮುಂದುವರಿದಿದೆ. ಮುಹರ್ರಮ್‌ನ 8ನೇ ದಿನವಾದ ರವಿವಾರ ಯಾವುದೇ ಮೆರವಣಿಗೆ ನಡೆಸುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀನಗರದ ಕೆಲವು ಪ್ರದೇಶಗಳಲ್ಲಿ ನಿರ್ಬಂಧ ಮರು ವಿಧಿಸಲಾಗಿತ್ತು.

ಜಮ್ಮು ಕಾಶ್ಮೀರದಲ್ಲಿ ಮೆರವಣಿಗೆಯನ್ನು ತಡೆಯಲು ಪ್ರತೀ ವರ್ಷ ಮುಹರ್ರಮ್‌ನ 8 ಮತ್ತು 10ನೇ ದಿನ ಜನರ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ. ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರತೀ ಶುಕ್ರವಾರ ನಿರ್ಬಂಧವನ್ನು ವಿಧಿಸಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯದ ಯಾವುದೇ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ನೀಡುತ್ತಿಲ್ಲ. ಕಳೆದ 36 ದಿನಗಳಿಂದ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ಸಾಮಾನ್ಯ ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ.

ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪದ ಕಾರಣ ಶಾಲೆ ಕಾಲೇಜುಗಳನ್ನು ಆರಂಭಿಸುವ ಸರಕಾರದ ಪ್ರಯತ್ನ ಸಫಲವಾಗಿಲ್ಲ. ಸರಕಾರಿ ಕಚೇರಿಗಳಲ್ಲಿ ಸಿಬಂದಿಗಳ ಹಾಜರಾತಿಯೂ ಕಡಿಮೆಯಿದೆ. ರಾಜ್ಯದಲ್ಲಿ ಸ್ಥಿರ ದೂರವಾಣಿ ವ್ಯವಸ್ಥೆಯನ್ನು ಮರುಸ್ಥಾಪಿಸಿದ್ದರೂ ಮೊಬೈಲ್ ಟೆಲಿಫೋನ್ ಹಾಗೂ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News