ಅಧಿಕಾರ ಇದ್ದಿದ್ದರೆ ಇವಿಎಂ ಬಳಕೆ ರದ್ದು ಪಡಿಸುತ್ತಿದ್ದೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-09-09 14:23 GMT

ಬೆಂಗಳೂರು, ಸೆ.9: ಜಗತ್ತಿನಲ್ಲಿ ಮುಂದುವರೆದ ರಾಷ್ಟ್ರಗಳೆಂದು ಗುರುತಿಸಿಕೊಂಡಿರುವಲ್ಲಿ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಯುತ್ತಿವೆ. ಇವಿಎಂಗಳ ಕಾರ್ಯವೈಖರಿ ಬಗ್ಗೆ ಹಲವು ಅನುಮಾನಗಳಿವೆ. ನನಗೆ ಅಧಿಕಾರ ಇದ್ದಿದ್ದರೆ ಇವಿಎಂಗಳ ಬಳಕೆಯನ್ನು ರದ್ದು ಪಡಿಸುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮುಂಬರುವ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಬೇಕು. ಇದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಸಹಕಾರ ನೀಡಿದರೆ, ಅದರ ನೇತೃತ್ವವನ್ನು ಕಾಂಗ್ರೆಸ್ ಪಕ್ಷ ವಹಿಸಿಕೊಳ್ಳಲು ಸಿದ್ಧವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಆರ್ಥಿಕ ಶಿಸ್ತು ಕಾಪಾಡಿದ್ದರು. ಆದರೆ, ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಆರ್ಥಿಕತೆ ಅಧೋಗತಿಗೆ ಹೋಗಿದೆ. ದೇಶದ ಇತಿಹಾಸದಲ್ಲೇ ಜಿಡಿಪಿ ಇಷ್ಟೊಂದು ಕುಸಿದಿರಲಿಲ್ಲ. ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೇವಲ ಭಾಷಣದಲ್ಲಿ ಕಾಲ ಕಳೆಯುತ್ತಿರುವ ಪ್ರಧಾನಿ, ದೇಶದ ಆರ್ಥಿಕತೆಯ ಬಗ್ಗೆ ಒತ್ತು ನೀಡುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ, ಕಾನೂನು ಹಾಗೂ ಜನಾದೇಶದಂತೆ ರಚನೆಯಾಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಪ್ರಜಾತಂತ್ರದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರು ಎಷ್ಟು ದಿನ ಮುಖ್ಯಮಂತ್ರಿ ಆಗಿರುತ್ತಾರೋ ಗೊತ್ತಿಲ್ಲ ಎಂದು ಅವರು ಹೇಳಿದರು.

ಸಂಪುಟದಲ್ಲಿರುವ ಎಲ್ಲ ಸಚಿವರನ್ನು ಉಪ ಮುಖ್ಯಮಂತ್ರಿ ಮಾಡಿಕೊಳ್ಳಲಿ. ಇದರಿಂದ, ಆಡಳಿತಾತ್ಮಕ ವೆಚ್ಚ ಹೆಚ್ಚಾಗಲಿದೆಯೇ ಹೊರತು, ರಾಜ್ಯಕ್ಕೆ ಯಾವುದೇ ಉಪಯೋಗವಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದೂವರೆ ತಿಂಗಳಾಯಿತು, ಕೇಂದ್ರದಲ್ಲಿ ನೂರು ದಿನಗಳಾಯಿತು. ಆದರೆ, ಯಾವ ಕೆಲಸಗಳು ಆಗುತ್ತಿಲ್ಲ ಎಂದು ಅವರು ದೂರಿದರು.

ಕಾಂಗ್ರೆಸ್ ಮುಂದೆ ಗಂಭೀರವಾದ ಸವಾಲುಗಳಿವೆ. ಲೋಕಸಭಾ ಚುನಾವಣೆಯಲ್ಲಿ ನಮಗೆ ಭಾರೀ ಹಿನ್ನಡೆಯಾಗಿತ್ತು. ನಾವು ಯಾರು ಕೂಡ ಈ ರೀತಿಯ ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿಯವರಿಗೆ ಇಷ್ಟೊಂದು ಸ್ಥಾನ ಬರಲಿದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲೂ ನಮಗೆ ಸೋಲಾಯಿತು. ಆದರೆ, ಶೇಕಡವಾರು ಮತಗಳಿಕೆಯನ್ನು ಗಮನಿಸಿದರೆ ಬಿಜೆಪಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ. ಬಿಜೆಪಿಯವರು ತಮ್ಮ ಸ್ಥಾನಗಳನ್ನು ಹೆಚ್ಚಿಸಿಕೊಂಡಿದ್ದಾರೆಯೇ ಹೊರತು, ಮತಗಳಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. ಇದು ಪ್ರಜಾಪ್ರಭುತ್ವದ ವಿಪರ್ಯಾಸ ಎಂದು ಸಿದ್ದರಾಮಯ್ಯ ಹೇಳಿದರು.

ಜನರು ಕೊಟ್ಟಿರುವ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ನನ್ನ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡಿಸಲಾಯಿತು. ಇದರಿಂದಾಗಿ, ನಮ್ಮ ಸರಕಾರದ ಅವಧಿಯಲ್ಲಿ ಮಾಡಿದ ಸಾಧನೆಗಳು ಮಂಕಾದವು. ಈ ಹಿಂದೆ ಯಾವುದೇ ಸರಕಾರ ಮಾಡದ ಕೆಲಸಗಳನ್ನು ನಾವು ಮಾಡಿದ್ದೆವು ಎಂದು ಅವರು ತಿಳಿಸಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಾಗಿತ್ತು. ಆದರೂ, ಜನರು ನಮ್ಮ ಕೈ ಹಿಡಿಯಲಿಲ್ಲ. ಪರಿಣಾಮಕಾರಿಯಾಗಿ ನಾವು ಚುನಾವಣಾ ಪ್ರಚಾರ ಮಾಡುವಲ್ಲಿ ವಿಫಲವಾಗಿದ್ದೇ ಸೋಲಿಗೆ ಕಾರಣವಾಯಿತು. ನಮ್ಮ ವಿರುದ್ಧದ ಆರೋಪಗಳಿಗೆ ಸಮರ್ಪಕವಾಗಿ ತಿರುಗೇಟು ಕೊಡಲು ಸಾಧ್ಯವಾಗಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕಳೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಆದುದರಿಂದ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆ ಮಾಡಲಾಯಿತು. 37 ಸ್ಥಾನಗಳನ್ನು ಗೆದ್ದಿದ್ದರೂ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಕೊಡಲಾಗಿತ್ತು ಎಂದು ಅವರು ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ? ಯಡಿಯೂರಪ್ಪ ಒಲ್ಲದ ಶಿಶುವಿದ್ದಂತೆ, ಬಿಜೆಪಿ ಹೈಕಮಾಂಡ್‌ಗೆ ಅವರು ಮುಖ್ಯಮಂತ್ರಿ ಆಗುವುದು ಇಷ್ಟವಿಲ್ಲ. ಅದಕ್ಕಾಗಿಯೇ, ಅವರು ಹೇಳಿದವರನ್ನು ಸ್ಪೀಕರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News