ಒಂದು ವರ್ಷ ಶೋಷಣೆ ನಡೆಸಿ, ಅತ್ಯಾಚಾರಗೈದ ಬಿಜೆಪಿ ನಾಯಕ ಚಿನ್ಮಯಾನಂದ: ಯುವತಿಯ ಆರೋಪ

Update: 2019-09-09 17:20 GMT

ಲಕ್ನೋ, ಸೆ. 9: ಬಿಜೆಪಿ ಮಾಜಿ ಸಂಸದ ಚಿನ್ಮಯಾನಂದ ವಿರುದ್ಧ ಕಿರುಕುಳದ ಆರೋಪ ಮಾಡಿದ 23ರ ಹರೆಯದ ಕಾನೂನು ವಿದ್ಯಾರ್ಥಿನಿ, ಚಿನ್ಮಯಾನಂದ ತನ್ನ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸೋಮವಾರ ಆರೋಪಿಸಿದ್ದಾರೆ.

ಪ್ರಭಾವಿ ವ್ಯಕ್ತಿಗಳು ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸುವ ವೀಡಿಯೊವನ್ನು ಆಗಸ್ಟ್ 24ರಂದು ಪೋಸ್ಟ್ ಮಾಡಿ ವಿದ್ಯಾರ್ಥಿನಿ ನಾಪತ್ತೆಯಾಗಿದ್ದರು. ಆದರೆ, ಅವರು ಯಾರ ಹೆಸರನ್ನು ಉಲ್ಲೇಖಿಸಿರಲಿಲ್ಲ. ಅವರ ತಂದೆ ಸಲ್ಲಿಸಿದ ನಾಪತ್ತೆ ದೂರಿನಲ್ಲಿ ಕಾಲೇಜಿನ ಆಡಳಿತ ನಿರ್ದೇಶಕ ಚಿನ್ಮಯಾನಂದರ ಹೆಸರನ್ನು ಉಲ್ಲೇಖಿಸಿದ್ದರು. ಆಗಸ್ಟ್ 27ರಂದು ಉತ್ತರಪ್ರದೇಶ ಪೊಲೀಸರು ಚಿನ್ಮಯಾನಂದ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು. ಅನಂತರ ವಿದ್ಯಾರ್ಥಿನಿ ಆಗಸ್ಟ್ 30ರಂದು ರಾಜಸ್ಥಾನದಲ್ಲಿ ಪತ್ತೆಯಾಗಿದ್ದರು.

ಕಿರುಕುಳದ ಆರೋಪದ ತನಿಖೆ ನಡೆಸಲು ಉತ್ತರಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಉತ್ತರಪ್ರದೇಶದ ಶಹಜಹಾನ್‌ಪುರ ಪೊಲೀಸರು ಅತ್ಯಾಚಾರದ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ‘‘ಸ್ವಾಮಿ ಚಿನ್ಮಯಾನಂದ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕಳೆದ ಒಂದು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಾ ಬಂದಿದ್ದಾನೆ’’ ಎಂದು ವಿದ್ಯಾರ್ಥಿನಿ ಶಾಲಿನಿಂದ ಮುಖ ಮುಚ್ಚಿಕೊಂಡು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ದಿಲ್ಲಿ ಪೊಲೀಸರು ಲೋಧಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಹಾಗೂ ಶಹಜಹಾನ್‌ಪುರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಆದರೆ, ಅತ್ಯಾಚಾರ ಪ್ರಕರಣ ದಾಖಲಿಸಿಲ್ಲ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. ವಿಶೇಷ ತನಿಖಾ ತಂಡ ರವಿವಾರ ತನ್ನನ್ನು 11 ಗಂಟೆಗಳ ಕಾಲ ವಿಚಾರಣೆ ನಡೆಸಿತು. ತಾನು ಆತ ಅತ್ಯಾಚಾರ ನಡೆಸಿರುವ ಬಗ್ಗೆ ಹೇಳಿದೆ. ತಾನು ಎಲ್ಲವನ್ನು ಹೇಳಿದ ಬಳಿಕವೂ ಚಿನ್ಮಯಾನಂದನನ್ನು ಇದುವರೆಗೆ ಬಂಧಿಸಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News