ವೇಗವಾಗಿ ವಾಹನ ಚಲಾಯಿಸಿದ್ದಕ್ಕೆ ನಾನು ಕೂಡ ದಂಡ ಪಾವತಿಸಿದೆ: ನಿತಿನ್ ಗಡ್ಕರಿ

Update: 2019-09-09 15:47 GMT

ಮುಂಬೈ, ಸೆ. 9: ಸಂಚಾರ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ವಿಧಿಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ತನ್ನ ಮೇಲೆ ಕೂಡ ದಂಡ ವಿಧಿಸಲಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.

ಮಂಬೈಯ ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ ವಾಹನವನ್ನು ವೇಗವಾಗಿ ಚಲಾಯಿಸಿದ ಹಿನ್ನೆಲೆಯಲ್ಲಿ ತನ್ನ ಮೇಲೆ ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಸ್ತೆಯಲ್ಲಿ ಶಿಸ್ತು ತರಲು ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆ ವಿಧಿಸುವ ಹಿನ್ನೆಲೆಯಲ್ಲಿ ಮೋಟರ್ ವಾಹನ ತಿದ್ದುಪಡಿ ಕಾಯ್ದೆಗೆ ಕಳೆದ ತಿಂಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮ್ಮತಿ ನೀಡಿದ್ದರು.

ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ನಮ್ಮ ಸರಕಾರದ ಅತಿ ದೊಡ್ಡ ಸಾಧನೆ. ಅತ್ಯಧಿಕ ದಂಡ ಪಾರದರ್ಶಕತೆ ತರಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಭಾರತದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಅಟೋ ಎಂಜಿನಿಯರಿಂಗ್ ಜೊತೆ ರಸ್ತೆ ಎಂಜಿನಿಯರಿಂಗ್ ಕೂಡ ಕಾರಣ ಎಂದು ಅವರು ತಿಳಿಸಿದರು. ಕೇಂದ್ರ ಸರಕಾರದ ಇತರ ಪ್ರಮುಖ ನಿರ್ಧಾರಗಳ ಮಾಹಿತಿ ನೀಡಿದ ಅವರು, ನಮ್ಮ ಮೊದಲ ಸಾಧನೆ ತ್ರಿವಳಿ ತಲಾಕ್ ಮಸೂದೆ ಮಂಜೂರು. ಅದು ಚಾರಿತ್ರಿಕ ಗಳಿಗೆ ಎಂದರು. ಕಾಶ್ಮೀರದ ಕುರಿತ ನಿರ್ಧಾರವನ್ನು ಉಲ್ಲೇಖಿಸಿದ ಅವರು, ಅದು ಸರಕಾರದ ಪ್ರಮುಖ ಸಾಧನೆ ಎಂದರು. ವಿಧಿ 370ರ ಕಾರಣಕ್ಕೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಬಡತನ ಹಾಗೂ ಹಸಿವು ಇತ್ತು. ಅಲ್ಲಿ ಪಾಕಿಸ್ತಾನ ಛಾಯಾ ಸಮರ ನಡೆಸುತ್ತಿದೆ. ಉಗ್ರರು ಭಯೋತ್ಪಾದನೆ ಹರಡುತ್ತಿದ್ದಾರೆ. ಕಲ್ಲು ತೂರಾಟಗಾರರಿಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎಂದು ಗಡ್ಕರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News