ಅಕಾಡಮಿಗಳ ಅವಧಿ ಮೊಟಕು ವಿಚಾರ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-09-09 16:53 GMT

ಬೆಂಗಳೂರು, ಸೆ.9: ರಾಜ್ಯ ಸರಕಾರ ಬದಲಾದ ಕೂಡಲೇ ಅಕಾಡಮಿಗಳ ಅವಧಿ ಮೊಟಕುಗೊಳಿಸಿರುವುದನ್ನು ಪ್ರಶ್ನಿಸಿ ನಾಟಕ ಅಕಾಡಮಿ ನಿಕಟಪೂರ್ವ ಅಧ್ಯಕ್ಷ ಜೆ.ಲೋಕೇಶ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ. 

ಈ ಕುರಿತು ನಾಟಕ ಅಕಾಡಮಿ ನಿಕಟಪೂರ್ವ ಅಧ್ಯಕ್ಷ ಜೆ.ಲೋಕೇಶ್, ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪಿ.ಕೆ.ಪೊನ್ನಪ್ಪ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ಅಕಾಡಮಿಗಳ ನಿಯಮಾವಳಿ ಬೈ-ಲಾ ಪ್ರಕಾರ ಹಾಗೂ ಬರಗೂರು ರಾಮಚಂದ್ರಪ್ಪ ಸರಕಾರಕ್ಕೆ ನೀಡಿರುವ ಸಾಂಸ್ಕೃತಿಕ ನೀತಿಯಲ್ಲಿ ಸರಕಾರಗಳು ಬದಲಾದರೂ ಅಕಾಡಮಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಮುಂದುವರಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೂ ಬಿಜೆಪಿ ಸರಕಾರ ರಚನೆಯಾದ ಮೂರೇ ದಿನಕ್ಕೆ ಎಲ್ಲ ಅಕಾಡಮಿಗಳ ಅಧಿಕಾರ ಅವಧಿ ಮೊಟಕುಗೊಳಿಸಿದ್ದಾರೆ. ಹೀಗಾಗಿ, ರಾಜ್ಯ ಸರಕಾರ ಜೆ.ಲೋಕೇಶ್, ಪಿ.ಕೆ.ಪೊನ್ನಪ್ಪ ಅವರ ಅಧಿಕಾರ ಮೊಟಕುಗೊಳಿಸಿ ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ, ನಿರ್ದೇಶಕರು, ರಾಜ್ಯ ನಾಟಕ ಅಕಾಡಮಿ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿಗೊಳಿಸಿ, ಸೆ.26ರಂದು ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News