ಪೈಲಟ್‌ ಗಳ ಮುಷ್ಕರ: ಬ್ರಿಟಿಶ್ ಏರ್‌ವೇಸ್‌ನ ಎಲ್ಲ ವಿಮಾನಗಳು ರದ್ದು

Update: 2019-09-09 16:55 GMT

ಲಂಡನ್, ಸೆ. 9: ಪೈಲಟ್‌ಗಳ ಮುಷ್ಕರದ ಮೊದಲನೆ ದಿನದಂದು, ಬ್ರಿಟನ್‌ನ ವಿಮಾನ ನಿಲ್ದಾಣಗಳಿಂದ ಹಾರುವ ಬಹುತೇಕ ಎಲ್ಲ ವಿಮಾನಗಳನ್ನು ರದ್ದುಪಡಿಸಬೇಕಾಗಿ ಬಂದಿದೆ ಎಂದು ಬ್ರಿಟಿಶ್ ಏರ್‌ವೇಸ್ ಸೋಮವಾರ ತಿಳಿಸಿದೆ.

‘‘ವೇತನಕ್ಕೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ನಾವು ಹಲವು ತಿಂಗಳುಗಳಿಂದ ಪ್ರಯತ್ನಿಸುತ್ತಿದ್ದೇವೆ. ಈಗ ಅದು ಈ ಹಂತಕ್ಕೆ ಬಂದಿರುವುದಕ್ಕೆ ನಾವು ವ್ಯಥೆ ಪಡುತ್ತೇವೆ’’ ಎಂದು ಹೇಳಿಕೆಯೊಂದರಲ್ಲಿ ಬ್ರಿಟಿಶ್ ಏರ್‌ವೇಸ್ ಹೇಳಿದೆ.

ಈ ವಿಷಯದಲ್ಲಿ ಬ್ರಿಟಿಶ್ ಏರ್‌ಲೈನ್ ಪೈಲಟ್ಸ್ ಅಸೋಸಿಯೇಶನ್ (ಬಿಎಎಲ್‌ಪಿಎ) ಜೊತೆಗೆ ಚರ್ಚೆ ಮುಂದುವರಿಸಲು ನಾವು ಸಿದ್ಧರಿದ್ದೇವೆ ಎಂದು ಅದು ತಿಳಿಸಿದೆ.

‘‘ಯಾವ ಪೈಲಟ್‌ಗಳು ಮುಷ್ಕರ ನಡೆಸುತ್ತಾರೆ ಎಂಬ ಮಾಹಿತಿಯನ್ನು ದುರದೃಷ್ಟವಶಾತ್ ಬಿಎಎಲ್‌ಪಿಎ ಒದಗಿಸಿಲ್ಲ. ಹಾಗಾಗಿ ಎಷ್ಟು ಮಂದಿ ಪೈಲಟ್‌ಗಳು ಕೆಲಸಕ್ಕೆ ಬರುತ್ತಾರೆ ಹಾಗೂ ಅವರು ಯಾವ ವಿಮಾನವನ್ನು ಹಾರಿಸುವ ಅರ್ಹತೆ ಹೊಂದಿದ್ದಾರೆ ಎಂಬುದನ್ನು ನಿರ್ಧರಿಸಲು ನಮಗೆ ಸಾಧ್ಯವಾಗಿಲ್ಲ. ಹಾಗಾಗಿ, ನಮ್ಮ ಬಹುತೇಕ 100 ಶೇಕಡ ವಿಮಾನಗಳ ಹಾರಾಟವನ್ನು ರದ್ದುಪಡಿಸದೆ ಬೇರೆ ಆಯ್ಕೆಯಿರಲಿಲ್ಲ’’ ಎಂದಿದೆ.

ಪೈಲಟ್‌ಗಳು ಮಂಗಳವಾರವೂ ತಮ್ಮ ಮುಷ್ಕರವನ್ನು ಮುಂದುವರಿಸಲಿದ್ದಾರೆ. ಬಳಿಕ, ಸೆಪ್ಟಂಬರ್ 27ರಂದು ಇನ್ನೂ ಒಂದು ದಿನ ಮುಷ್ಕರ ನಡೆಸುವ ಬೆದರಿಕೆಯೊಡ್ಡಿದ್ದಾರೆ. ಬಳಿಕ, ವಿವಾದ ಇತ್ಯರ್ಥಗೊಳ್ಳದಿದ್ದರೆ, ಚಳಿಗಾಲದ ರಜಾ ದಿನಗಳು ಹತ್ತಿರವಾಗುವ ಸಂದರ್ಭದಲ್ಲಿ ಇನ್ನೊಂದು ದಿನ ಮುಷ್ಕರ ನಡೆಸುವ ಸಾಧ್ಯತೆಯಿದೆ.

11.5 ಶೇ. ಏರಿಕೆಗೆ ಪೈಲಟ್‌ಗಳ ತಿರಸ್ಕಾರ

ಬ್ರಿಟಿಶ್ ಏರ್‌ವೇಸ್ ಮತ್ತು ಅದರ 4,300 ಪೈಲಟ್‌ಗಳ ನಡುವೆ ಒಂಬತ್ತು ತಿಂಗಳಿನಿಂದ ವೇತನ ಸಂಬಂಧಿ ಮಾತುಕತೆ ನಡೆಯುತ್ತಿದೆ. ಈ ಮುಷ್ಕರದಿಂದಾಗಿ ಸುಮಾರು 3,00,000 ಜನರ ಪ್ರಯಾಣ ಯೋಜನೆಗಳು ಅಸ್ತವ್ಯಸ್ತವಾಗಿದೆ.

ಮೂರು ವರ್ಷಗಳ ಅವಧಿಗೆ 11.5 ಶೇಕಡ ವೇತನ ಏರಿಕೆ ಮಾಡುವ ಪ್ರಸ್ತಾವವನ್ನು ಬ್ರಿಟಿಶ್ ಏರ್‌ವೇಸ್ ಜುಲೈಯಲ್ಲಿ ಮುಂದಿಟ್ಟಿದೆ. ಆದರೆ, ಅದನ್ನು ಬಿಎಎಲ್‌ಪಿಎ ತಿರಸ್ಕರಿಸಿದೆ.

ಈ ಏರಿಕೆಯ ಬಳಿಕ, ವಿಮಾನ ಕ್ಯಾಪ್ಟನ್‌ಗಳು ವರ್ಷಕ್ಕೆ ಸುಮಾರು 2 ಲಕ್ಷ ಪೌಂಡ್ (ಸುಮಾರು 1.76 ಕೋಟಿ ರೂಪಾಯಿ) ಪ್ಯಾಕೇಜ್ ಪಡೆಯುತ್ತಾರೆ.

ಇದು ‘ವಿಶ್ವದರ್ಜೆ’ಯ ವೇತನವಾಗಿದೆ ಎಂದು ಬ್ರಿಟಿಶ್ ಏರ್‌ವೇಸ್ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News