ರೈತರ ಹಿತರಕ್ಷಣೆಗೆ ಸರಕಾರ ಬದ್ಧ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-09-09 16:58 GMT

ಬೆಂಗಳೂರು, ಸೆ.9: ನೆರೆಯಿಂದ ಹಾನಿಗೀಡಾದ ರೈತರಿಗೆ ರಾಜ್ಯ ಸರಕಾರ ಸಾಕಷ್ಟು ನೆರವು ನೀಡಿದ್ದು, ಇನ್ನಷ್ಟು ಯೋಜನೆಗಳನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಸೋಮವಾರ ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜು ಹಾಗು ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ನೇತೃತ್ವದ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿದರು.

ರೈತರ ಹಿತರಕ್ಷಣೆಗೆ ರಾಜ್ಯ ಸರಕಾರ ಬದ್ಧವಾಗಿದೆ. ಉತ್ತರ ಕರ್ನಾಟಕ, ಉತ್ತರ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಪ್ರವಾಹದಿಂದ ಬಾಧಿತರಾದ ರೈತ ಕುಟುಂಬಗಳಿಗೆ ಸರಕಾರ ನೆರವು ನೀಡಿದೆ. ಅಲ್ಲದೆ, ಎಲ್ಲ ಕಡೆಗಳಿಂದ ಸಂಪೂರ್ಣ ವರದಿಯನ್ನು ಅವಲೋಕಿಸಿದ ಬಳಿಕ ಹೆಚ್ಚಿನ ಯೋಜನೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಮಹದಾಯಿ ಸಮಸ್ಯೆ ಬಗೆಹರಿಸಲು ಗೋವಾ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಅಲ್ಲದೆ, ಪ್ರವಾಹ ಪೀಡಿತ ಗ್ರಾಮಗಳನ್ನು ಸ್ಥಳಾಂತರ ಮಾಡಿ ಹೊಸ ಗ್ರಾಮಗಳ ನಿರ್ಮಾಣಕ್ಕೆ ರಾಜ್ಯ ಸರಕಾರ ಸಿದ್ಧತೆ ಕೈಗೊಂಡಿದೆ. ಈ ಭಾಗವಾಗಿ ಈಗಾಗಲೇ ಹಲವು ಕಡೆಗಳಲ್ಲಿ ಕೆಲಸವೂ ಆರಂಭವಾಗಿದೆ ಎಂದು ಹೇಳಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಮೈಕ್ರೋ ಫೈನಾನ್ಸ್ ಕಂಪೆನಿಗಳು ಗಂಜಿ ಕೇಂದ್ರಗಳಿಗೆ ಹೋಗಿ ಹಣ ವಸೂಲಿಗೆ ಮುಂದಾಗಿರುವ ಕುರಿತು ಕೋಡಿಹಳ್ಳಿ ಚಂದ್ರಶೇಖರ್ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅವುಗಳ ವಿರುದ್ದ ಕ್ರಮಕೈಗೊಳ್ಳಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಕ್ಷಣವೇ ರಾಯಚೂರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಮುಖ್ಯಮಂತ್ರಿ ಫೈನಾನ್ಸ್ ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ, ಈ ಕಂಪೆನಿಗಳು ಮುಂದೆ ಹೀಗೆ ಮಾಡದಂತೆ ಕ್ರಮ ವಹಿಸುವಂತೆ ತಿಳಿಸಿದರು.

ಬರ ಪರಿಹಾರ ಮೊತ್ತ ಬಿಡುಗಡೆ, ಕೃಷ್ಣಾ ನದಿ ನಿರ್ವಹಣ ಪ್ರಾಧಿಕಾರ ರಚನೆ, ನೀರಾ ಮಂಡಳಿ ಸ್ಥಾಪನೆ, ಯಶಸ್ವಿನಿ ಯೋಜನೆ ಜಾರಿ ಸೇರಿದಂತೆ ರೈತರ ನಿಯೋಗ ಸಲ್ಲಿಸಿದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News